ಬೆಂಗಳೂರು: ಭಾರತದ ಮಾರುಕಟ್ಟೆಯಲ್ಲಿ ನಿಷೇಧಿತ ಚೀನಾ ಬೆಳ್ಳುಳ್ಳಿ ಬಂದಿದ್ದು ಕರ್ನಾಟಕದ ಕೆಲವು ಮಾರುಕಟ್ಟೆಗಳಿಗೂ ಬಂದಿದೆ ಎನ್ನುವ ಆತಂಕಕಾರೀ ವಿಚಾರ ಬೆಳಕಿಗೆ ಬಂದಿದೆ. ಈಗಾಗಲೇ ಶಿವಮೊಗ್ಗದ ಹಲವು ಕಡೆ ಅಧಿಕಾರಿಗಳು ದಾಳಿ ಮಾಡಿ ನಿಷೇಧಿತ ಬೆಳ್ಳುಳ್ಳಿ ವಶಪಡಿಸಿಕೊಂಡಿದ್ದಾರೆ.
ಆರೋಗ್ಯಕ್ಕೆ ಹಾನಿಕಾರಕವಾದ ಅಂಶವಿದೆ ಎಂಬ ಕಾರಣಕ್ಕೆ ಚೀನಾ ಬೆಳ್ಳುಳ್ಳಿಯಲ್ಲಿ ಭಾರತದಲ್ಲಿ ನಿಷೇಧಿಸಲಾಗಿದೆ. ಆದರೆ ಇತ್ತೀಚೆಗೆ ಬೆಳ್ಳುಳ್ಳಿಗೆ ಬೆಲೆ ಹೆಚ್ಚಳವಾಗಿರುವುದರಿಂದ ಕಳ್ಳ ಮಾರ್ಗದ ಮೂಲಕ ಚೀನಾ ಬೆಳ್ಳುಳ್ಳಿ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ವಿಚಾರ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಕರ್ನಾಟಕಕ್ಕೂ ಕಾಲಿಟ್ಟಿದೆ ಎನ್ನುವುದು ಆತಂಕಕಾರೀ ವಿಚಾರವಾಗಿದೆ.
ಶಿವಮೊಗ್ಗದ 8 ಕಡೆ ದಾಳಿ ಮಾಡಿರುವ ಆಹಾರ ಸುರಕ್ಷತಾ ಅಧಿಕಾರಿಗಳು, 50 ಕ್ಕೂ ಹೆಚ್ಚು ಕೆ.ಜಿ. ಬೆಳ್ಳುಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾ ಮಾರ್ಕೆಟ್, ಎಪಿಎಂಸಿ ಮಾರುಕಟ್ಟೆ ಮುಂತಾದೆಡೆ ದಾಳಿ ಮಾಡಲಾಗಿದೆ.
ಈ ಬೆಳ್ಳುಳ್ಳಿ ಗುರುತಿಸುವುದು ಹೇಗೆ ಮತ್ತು ಅಡ್ಡಪರಿಣಾಮಗಳೇನು?
ಚೀನಾ ಮಾರುಕಟ್ಟೆ ಆರೋಗ್ಯಕ್ಕೆ ಮಾರಕವಾಗಿದೆ. ನಿಷೇಧಿತ ರಾಸಾಯನಿಕಗಳನ್ನು ಬಳಸಿ ಇದನ್ನು ಬೆಳೆಯಲಾಗುತ್ತದೆ. ಚೀನಾ ಬೆಳ್ಳುಳ್ಳಿ ನೋಡಲು ದಪ್ಪವಾಗಿರುತ್ತದೆ ಮತ್ತು ಕೊಂಚ ಪಿಂಕ್ ಬಣ್ಣದಲ್ಲಿರುತ್ತದೆ. ಅತಿಯಾಗಿ ರಾಸಾಯನಿ ಬಳಸುವುದರಿಂದ ಬೇಗನೇ ಕೆಡುವುದಿಲ್ಲ. ಆದರೆ ಇದನ್ನು ಸೇವನೆ ಮಾಡುವುದರಿಂದ ತೂಕ ಹೆಚ್ಚಳವಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಈ ಬೆಳ್ಳುಳ್ಳಿ ಸೇವನೆಯಿಂದ ಮೂತ್ರಕೋಶ, ಲಿವರ್ ಗೆ ಹಾನಿಯಾಗಬಹುದು.