ಮಗುವೊಂದು ಆಟವಾಡುತ್ತಾ ಹೋಗಿ, ಕಾಲು ಜಾರಿ ಕಾಲುವೆಗೆ ಬಿದ್ದು ಬಾರದ ಲೋಕಕ್ಕೆ ಪಯಣ ಬೆಳೆಸಿದೆ.
ಮಗುವೊಂದು ಕಾಲು ಜಾರಿ ಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆ ಕಾರಟಗಿ ಸಮೀಪದ ತೊಂಡಿಹಾಳ ಯರಮ್ಮನಕ್ಯಾಂಪ್ ನಲ್ಲಿ ನಡೆದಿದೆ.
ಸಣ್ಣ ಸಣ್ಣ ಗುಡಿಸಲುಗಳನ್ನು ಹಾಕಿಕೊಂಡು ದುಡಿದು ಜೀವನ ಸಾಗಿಸುತ್ತಿರುವ 10ಕ್ಕೂ ಅಧಿಕ ಕುಟುಂಬಗಳು ಹುಳ್ಕಿಹಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯ ತೊಂಡಿಹಾಳ ಮತ್ತು ಹುಳ್ಕಿಹಾಳ ಮಧ್ಯೆ ಹರಿಯುವ ಹಳ್ಳದ ದಡದಲ್ಲಿ ವಾಸವಾಗಿದ್ದಾರೆ. ದುಡಿಮೆಯೇ ಮೂಲವಾಗಿದ್ದರಿಂದ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೊಗುವುದು ಇಲ್ಲಿನ ಜನಕ್ಕೆ ಅನಿವಾರ್ಯವಾಗಿದೆ.
ಪ್ರತಿದಿನದಂತೆ ಕ್ಯಾಂಪಿನ ಎಲ್ಲ ಮಕ್ಕಳು ಆಟವಾಡುತ್ತಿರುವಾಗ 2ವರ್ಷದ ಹೆಣ್ಣು ಮಗುವೊಂದು ಆಟವಾಡುತ್ತಾ ಹೋಗಿ ಪಕ್ಕದಲ್ಲಿ ಇರುವ ಕಾಲುವೆಗೆ ಬಿದ್ದು ಸಾವನ್ನಪ್ಪಿದೆ.
ಈ ಕ್ಯಾಂಪಿನಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ್ಲ, ಪಕ್ಕದಲ್ಲೆ ದೊಡ್ಡದಾದ ಹಳ್ಳ, ಕಾಲುವೆಗಳು ಹರಿದು ಹೋಗುತ್ತವೆ. ಅದರೂ ಈ ಕ್ಯಾಂಪಿನ ಜನರ ಮತ್ತು ಮಕ್ಕಳ ರಕ್ಷಣೆಗೆ ಯಾವುದೇ ತಡೆಗೊಡೆಯಾಗಲಿ, ಮುಳ್ಳು ತಂತಿಯಾಗಲಿ ಇಲ್ಲ. ಸೂಕ್ತ ರಕ್ಷಣೆ ನೀಡಬೇಕೆಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.