ಆನೇಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರ ಪಟ್ಟಿಯಲ್ಲಿ ಸುಮಾರು 22 ಸಾವಿರ ಮತದಾರರ ಹೆಸರು ನಾಪತ್ತೆ ಆಗಿರುವ ಬಗ್ಗೆ ಪರಿಶೀಲನೆ ನಡೆಸಲು ಎಂದು ಆನೇಕಲ್ ಪಟ್ಟಣಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ದಯಾನಂದ್ ರವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ಆನೇಕಲ್ ಪಟ್ಟಣದ ವಿವರ್ಸ್ ಕಾಲೋನಿಯಲ್ಲಿ ಮತದಾರರ ಮನೆಗೆ ತೆರಳಿದ ಜಿಲ್ಲಾಧಿಕಾರಿ ದಯಾನಂದ್ ಮತದಾರರ ಬಳಿ ಸಮಸ್ಯೆಯನ್ನ ಆಲಿಸಿದರು. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮತದಾರ ಪಟ್ಟಿಯಲ್ಲಿ ಆಗಿರುವ ಗೊಂದಲಗಳನ್ನು ಬಗೆಹರಿಸಿ ಮತದಾರ ಪಟ್ಟಿಯನ್ನ ಪರಿಷ್ಕರಣೆ ಮಾಡಲು ಚುನಾವಣಾ ಆಯೋಗ ಸೂಚನೆ ನೀಡಿದೆ. ಹೀಗಾಗಿ ಆನೇಕಲ್ ತಾಲೂಕಿನ ಹೆಬ್ಬಗೋಡಿ ನಗರಸಭೆ, ಚಂದಾಪುರ,ಆನೇಕಲ್ ಹಾಗೂ ಅತ್ತಿಬೆಲೆ ಪುರಸಭಾ ವ್ಯಾಪ್ತಿಯಲ್ಲಿ ಬೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿಯನ್ನ ಪಡೆಯಲಾಯಿತು. ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಜಿಲ್ಲಾಧಿಕಾರಿ ದಯಾನಂದ್ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ 12 ಸಾವಿರ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ, ಅಲ್ಲದೆ 23 ಸಾವಿರ ಮತದಾರರನ್ನ ಮತದಾರ ಪಟ್ಟಿಯಿಂದ ಕೈ ಬಿಡಲಾಗಿದೆ. ಮತದಾರ ಪಟ್ಟಿಯಿಂದ ಕೈ ಬಿಟ್ಟಿರುವ ಮತದಾರರ ಕುರಿತು ಮಾಹಿತಿ ಪಡೆದು ತಪ್ಪು ಕಂಡು ಬಂದರೆ ಅವರನ್ನು ಮತ್ತೆ ಮತದಾರ ಪಟ್ಟಿಗೆ ಸೇರ್ಪಡೆ ಮಾಡಲು ಚುನಾವಣಾ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಎಂದರು. ಅಲ್ಲದೇ ಪ್ರತಿ ಮೂರು ತಿಂಗಳಿಗೊಮ್ಮೆ 18 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದ್ದು ಆನ್‌ಲೈನ್ ಮೂಲಕವೇ ಮತದಾರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಬಹುದಾಗಿದೆ ಎಂದು ಅವರು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದರು.