ಅನುದಾನವನ್ನು ಯಾವುದೇ ಕಾರಣಕ್ಕೂ ಲ್ಯಾಪ್ಸ್ ಆಗೋದಕ್ಕೆ ಬಿಡೋದೇ ಇಲ್ಲ. ಹೀಗಂತ ರಾಜ್ಯದ ಜಿಪಂ ಅಧ್ಯಕ್ಷೆಯೊಬ್ಬರು ಹೇಳಿದ್ದಾರೆ.
2020-21ನೇ ಸಾಲಿನ ಚಿತ್ರದುರ್ಗ ಜಿಲ್ಲೆಯ ಅನುದಾನ ಯಾವುದೇ ಕಾರಣಕ್ಕೆ ಲ್ಯಾಪ್ಸ್ ಆಗಬಾರದು. ಯಾವುದೇ ಕಾರಣಕ್ಕೂ ನನ್ನ ಅವಧಿಯಲ್ಲಿ ಅನುದಾನ ಲ್ಯಾಪ್ಸ್ ಆಗಲು ಬಿಡುವುದಿಲ್ಲ.
ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಸೂಚನೆ ನೀಡಿದ್ದಾರೆ.
ಬರದ ಜಿಲ್ಲೆಯ ಅನುದಾನ ಲ್ಯಾಪ್ಸ್ ಆದರೆ ಜಿಲ್ಲೆಯ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಅನುಮೋದನೆ ಪಡೆದ ನಂತರ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಪ್ರಸಕ್ತ ವರ್ಷದ ಫೆಬ್ರುವರಿ ಒಳಗೆ ಕಾಮಗಾರಿಗಳನ್ನು ಮುಕ್ತಾಯಗೊಳಿಸಬೇಕು. ಯಾವುದೇ ಕಾರಣಕ್ಕೆ ವರ್ಷಾಂತ್ಯದವರೆಗೆ ಸಮಯ ವ್ಯಯಮಾಡಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮೊಬೈಲ್ ಸ್ವೀಚ್ ಆಫ್ ಮಾಡಬೇಡಿ. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಹಾಗೂ ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ನೀಡಲು ಜನಪ್ರತಿನಿಧಿಗಳು ಫೋನ್ ಮಾಡಿದಾಗ ಅಧಿಕಾರಿಗಳು ಸರಿಯಾಗಿ ಸ್ಪಂದಿಸಬೇಕು. ಸರ್ಕಾರ ನೀಡಿರುವ ಮೊಬೈಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ಬಳಸಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ಮೊಬೈಲ್ ಸ್ವೀಚ್ ಆಫ್ ಮಾಡಿಕೊಳ್ಳಬಾರದು ಎಂದು ಸೂಚನೆ ನೀಡಿದರು.