ಬರ ಪರಿಹಾರ ಕಾಮಗಾರಿಗಳಿಗೆ ಕೇಂದ್ರದಿಂದ ನೆರವಿನ ರೂಪದಲ್ಲಿ ಈವರೆಗೆ ಒಂದು ಪೈಸೆಯೂ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಜನ್ಮ ದಿನದ ಅಂಗವಾಗಿ ವಿಧಾನಸೌಧ ಆವರಣದಲ್ಲಿನ ಪ್ರತಿಮೆ ಬಳಿ ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಯವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬರ ಪರಿಹಾರ ಕಾಮಗಾರಿಗಳಿಗೆ ನಿಮಯಗಳ ಅನುಸಾರ 4072 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಅಕ್ಟೋಬರ್ 27ರಂದು ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 1782 ಕೋಟಿ ರೂ. ಬಿಡುಗಡೆಗೆ ಶಿಫಾರಸು ಮಾಡಲಾಗಿದೆ. ಆದರೆ ಈ ವರೆಗೆ ಅನುದಾನ ಬಂದಿಲ್ಲ ಎಂದು ಹೇಳಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ನೆರೆಯಿಂದ ಭಾರಿ ಅನಾಹುತ ಸಂಭವಿಸಿತ್ತು. ಅಂದಿನ ಪ್ರಧಾನಿ ಮನಮೋಹನಸಿಂಗ್ ಅವರು 2009ರಲ್ಲಿ ರಾಜ್ಯಕ್ಕೆ ಭೇಟಿ ನೀಡಿ ಸ್ಥಳದಲ್ಲೇ ಒಂದೂವರೆ ಸಾವಿರ ಕೋಟಿ ರೂ.ಗಳ ನೆರವು ಘೋಷಣೆ ಮಾಡಿದರು.
ಕೇಂದ್ರದ ಕರ್ತವ್ಯ: ಬರ ಪರಿಹಾರಕ್ಕೆ ಅನುದಾನ ಒದಗಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಅದು ರಾಜ್ಯಕ್ಕೆ ನೀಡುವ ಭಿಕ್ಷೆಯಲ್ಲ. ಹದಿನಾಲ್ಕನೇ ಹಣಕಾಸು ಆಯೋಗದ ಮಾರ್ಗಸೂಚಿಗಳ ಪ್ರಕಾರವೂ ಬರ ಪರಿಹಾರ ಕಾಮಗಾರಿಗಳಿಗೆ ಕೇಂದ್ರ ಸರ್ಕಾರವು ಆಧ್ಯತೆಯ ಮೇರೆಗೆ ಅನುದಾನವನ್ನು ಒದಗಿಸಬೇಕು ಎಂದರು.
ಬರ ಪರಿಹಾರ ಕಾಮಗಾರಿಗಳ ಕುರಿತಂತೆ ಪ್ರತಿಪಕ್ಷಗಳು ಅನಗತ್ಯ ಟೀಕೆ ಮಾಡುವ ಬದಲು ತುರ್ತಾಗಿ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಲಹೆ ಮಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.