ಬೆಂಗಳೂರು: 'ರಾಜಕೀಯವಾಗಿ ಇದು ನನಗೆ ಮಹತ್ವದ ತೀರ್ಪು....' ಇದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂಪ್ಪ ಅವರಿಂದ ಮುಂದಿನ ರಾಜಕೀಯ ಭವಿಷ್ಯದ ಕುರಿತಾಗಿ' ಹೊರಬಿದ್ದ ಅರ್ಥಗರ್ಭಿತ ಮಾತು.
ಇಂತಹದ್ದೊಂದು ತಣ್ಣನೆಯ ರಾಜಕೀಯದ ಒಳಸುಳಿಯ ಮಾತು ಯಡಿಯೂರಪ್ಪರ ಅಂತರಾಳದಿಂದ ಹೊರಹೊಮ್ಮಿದ್ದು, ಬೆಂಗಳೂರಿನ ಸಿವಿಲ್ ಕೋರ್ಟ್ ನ್ಯಾಯಾಲಯದ ಹೊರ ಆವರಣದಲ್ಲಿ. ಸಂದರ್ಭ: ಸುಮಾರು 40 ಕೋಟಿ. ರು. ಕಿಕ್ ಬ್ಯಾಕ್ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪಮುಕ್ತರಾಗಿ ಹೊರಬಂದ ವೇಳೆ. ಗಂಭೀರ ಆರೋಪಕ್ಕೆ ಒಳಗಾಗಿರುವ ಯಡಿಯೂರಪ್ಪರಿಗೆ ಸಿಬಿಐ ವಿಶೇಷ ನ್ಯಾಯಲಯ ನೀಡಿರುವ ದೋಷಮುಕ್ತ ತೀರ್ಪು ರಾಜಕೀಯ ಭವಿಷ್ಯಕ್ಕೆ ಊಹಿಸಲಾರದಷ್ಟು ಪ್ಲಸ್ ಪಾಯಿಂಟ್ ನೀಡಿವೆ!
2011ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೋಟ್ಯಾಂತರ ರು. ಲಂಚ ಸ್ವೀಕರಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಅವರು ಅಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರೇರಣಾ ಟ್ರಸ್ಟ್ ಗೆ 20 ಕೋಟಿ ರು. ದೇಣಿಗೆ ಪಡೆದಿರುವುದು ಹಾಗೂ ಸೌಥ್ ವೆಸ್ಟ್ ಮೈನಿಂಗ್ ಕಂಪನಿ ಹಾಗೂ ಜಿಂದಾಲ್ ಕಂಪನಿಗೆ ಅನುಕೂಲ ಮಾಡಿಕೊಟ್ಟಿರುವ ಆರೋಪ ಸಹ ಕೇಳಿಬಂದಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಐದು ವರ್ಷಗಳ ಕಾಲ ವಾದ-ವಿವಾದದ ವಿಚಾರಣೆ ನಡೆದಿತ್ತು. ಈ ಆರೋಪ ಯಡಿಯೂರಪ್ಪರನ್ನು ಮಾನಸಿಕವಾಗಿ ಸಹಜವಾಗಿಯೇ ಕುಗ್ಗಿಸಿತ್ತು. ಅಲ್ಲದೆ, ರಾಜಕೀಯ ಭವಿಷ್ಯಕ್ಕೆ ಮಗ್ಗಲು ಮುಳ್ಳಾಗಿಯೂ ಪರಿಣಮಿಸಿತ್ತು. ಆದರೆ, ಈಗ ಆ ಎಲ್ಲ ಆರೋಪಗಳಿಂದ ಅವರು ಮುಕ್ತರಾಗಿ, ಮೈ ಕೊಡವಿಕೊಂಡು ಮೇಲೆದ್ದಿದ್ದಾರೆ. ಇನ್ನೇನಿದ್ದರೂ ರಾಜ್ಯ ಬಿಜೆಪಿಯಲ್ಲಿ ಯಡ್ಡಿಯದ್ದೇ ಕಾರು ಬಾರು.
ಸಿಬಿಐ ವಿಶೇಷ ನ್ಯಾಯಾಲಯ ತೀರ್ಪಿತ್ತ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ರಾಜಕೀಯ ಪಿತೂರಿಯಿಂದ ವ್ಯವಸ್ಥಿತವಾಗಿ ನನ್ನ ಮೇಲೆ ಮಾಡಿರುವ ಆರೋಪದ ಪ್ರಕರಣ. ನ್ಯಾಯಾಂಗದ ಮೇಲೆ ನನಗೆ ನಂಬಿಕೆಯಿತ್ತು. ಆ ನಂಬಿಗೆ ಈಗ ಸತ್ಯವಾಗಿದ್ದು, ವಿನಾಕಾರಣ ಆರೋಪ ಹೊರಿಸಿದ್ದು ಎನ್ನುವುದು ಸಾಬೀತಾಗಿದೆ ಎಂದಿದ್ದಾರೆ. ಅಷ್ಟೇ ಆಗಿದ್ದರೆ ಯಡಿಯೂರಪ್ಪರ ತಲೆಯಲ್ಲಿ ಯಾವುದೇ ಮುಂದಾಲೋಚನೆ ಇಲ್ಲ ಎನ್ನಬಹುದಿತ್ತು. ಆದರೆ ತಮ್ಮ ಮಾತನ್ನು ಮುಂದುವರಿಸಿ, ನ್ಯಾಯಾಲಯದ ತೀರ್ಪಿನಿಂದ ನನಗೆ ಆನೆ ಬಲ ಬಂದತಾಗಿದೆ. ರಾಜಕೀಯವಾಗಿ ಇದು ನನಗೆ ಅತ್ಯಂತ ಮಹತ್ವದ ತೀರ್ಪು' ಎಂದು ಹೇಳುವ ಮೂಲಕ ಮುಂದಿನ ರಾಜಕೀಯದ ಬಿರುಸಿನ ನಡಿಗೆಗೆ ನಾಂದಿ ಹಾಕಿದ್ದಾರೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಮಾತು.
ಆರೋಪವಿದ್ದಾಗ ಸಾರ್ವಜನಿಕರ ಎದುರು ವಿರೋಧಿ ಬಣದ ನೈತಿಕತೆ ಪ್ರಶ್ನೆ ಎತ್ತಲು ಸಾಧ್ಯವಿಲ್ಲ. ಈಗ ಆರೋಪ ಮುಕ್ತರಾಗಿರುವುದರಿಂದ ಯಡಿಯೂರಪ್ಪ ಲೀಲಾ ಜಾಲವಾಗಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಧುರೀಣರನ್ನು ತರಾಟೆಗೆ ತೆಗೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಅಲ್ಲದೆ, ಯಡಿಯೂರಪ್ಪರಿಗೆ ಅವರದ್ದೇ ಆದ ಒಂದು ಬೃಹತ್ ಅಭಿಮಾನಿ ಸಮುದಾಯವೇ ಇದೆ. ಅಲ್ಲದೆ, ಬಿಜೆಪಿಯಲ್ಲಿಯೂ ಅವರದ್ದೇ ಆದ ಒಂದು ದೊಡ್ಡ ಸಂಘಟನೆಯಿದೆ. ರಾಜ್ಯದ ಯಾವು ಮೂಲೆಗೆ ಬೇಕಾದರೂ ಅವರು ಪ್ರವಾಸ ಮಾಡಲಿ. ಅಲ್ಲಿ ನೂರಾರು ಜನರು ಅವರನ್ನು ಮುತ್ತಿಗೆ ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಅವರೊಬ್ಬ ಮಾಸ್ ಲೀಡರ್ ಆಗಿದ್ದಾರೆ. ಮುಂದಿನ ಚುನಾವಣೆಗೆ ಹಾಗೂ ರಾಜ್ಯ ಬಿಜೆಪಿಗೆ ಯಡ್ಡಿ 'ಐಕಾನ್' ಆಗಿ ಮತ್ತೊಮ್ಮೆ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವ ಮಾತು ರಾಜಕೀಯ ವಲಯದಲ್ಲಿ ಸಹಜವಾಗಿಯೇ ಕೇಳಿಬರುತ್ತಿದೆ.