ಬೆಂಗಳೂರು : ಕ್ಯಾನ್ಸರ್ ಪದದ ಅರ್ಥ ಸಾವು ಎಂದಲ್ಲ. ಇದೊಂದು ರೋಗದ ಹೆಸರು. ಕ್ಯಾನ್ಸರ್ ಬಂದಾಕ್ಷಣ ಸಾವು ಬಂದಿದೆ ಎಂಬ ಆತಂಕವನ್ನು ದೂರ ಮಾಡಲು ಜಾಗೃತಿ ಅಗತ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬೆಂಗಳೂರಿನಲ್ಲಿ ಕ್ಯಾನ್ಸರ್ ದಿನದ ಪ್ರಯುಕ್ತ ಕ್ಯಾನ್ಸರ್ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ಕ್ಯಾನ್ಸರ್ ದಿನ ಆಚರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಯಂತೆ ಒಂದು ವಾರ ಕ್ಯಾನ್ಸರ್ ಸಪ್ತಾಹ ವಿನೂತನವಾಗಿ ನಡೆಯಲಿದೆ ಎಂದು ತಿಳಿಸಿದರು.
ವಿಶ್ವ ಸಂಸ್ಥೆಯ ಪ್ರಕಾರ ಶಿಕ್ಷಣದ ಕೊರತೆ, ಬಡತನ ಇರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಕ್ಯಾನ್ಸರ್ ಶಿಬಿರ ಹಮ್ಮಿಕೊಂಡಿದೆ.
ಕಿದ್ವಾಯಿ ಸಂಸ್ಥೆ, ಅನೇಕ ಸಂಘ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಇದಕ್ಕೆ ಕೈ ಜೋಡಿಸಿವೆ. ಎಷ್ಟು ಬೇಗ ಕ್ಯಾನ್ಸರ್ ಪತ್ತೆಯಾಗುತ್ತದೋ ಅಷ್ಟು ಬೇಗ ಗುಣಪಡಿಸಬಹುದು. ಕ್ಯಾನ್ಸರ್ ರೋಗಿಗಳನ್ನು ಪ್ರೀತಿ ಮತ್ತು ಎಚ್ಚರಿಕೆಯಿಂದ ಆರೈಕೆ ಮಾಡಿ ಎಂದು ಹೇಳಿದರು.
ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ತಪಾಸಣೆಗೆ ವ್ಯವಸ್ಥೆ ಇದೆ. ಇದನ್ನು ತಾಲೂಕು ಆಸ್ಪತ್ರೆಗಳಿಗೂ ವಿಸ್ತರಣೆ ಮಾಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೂ ಇದನ್ನು ಶೀಘ್ರದಲ್ಲೇ ವಿಸ್ತರಣೆ ಮಾಡಲಾಗುವುದು.
ಮೈಸೂರು ಮತ್ತು ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಹುಬ್ಬಳ್ಳಿಯಲ್ಲೂ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.