ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಮೊತ್ತವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದರು.
ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮದಲ್ಲಿ ಅವರು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು. ವಿವಿಧ ಕಂಪೆನಿಗಳಿಗೆ ಹಣ ವರ್ಗಾಯಿಸಿ, ಅಲ್ಲಿಂದ ಹಣ ಡ್ರಾ ಮಾಡಿ, ಚುನಾವಣೆಗೆ ಬಳಸಿದ್ದು, ಹಣ ದುರುಪಯೋಗ ಆಗಿದೆ ಎಂದು ಆರೋಪಿಸಿದರು.
ಬಾರ್‍ನಲ್ಲಿ ಕುಳಿತು ಕುಡಿದ ಬಿಲ್ ಅನ್ನು ವಾಲ್ಮೀಕಿ ನಿಗಮದಿಂದ ಪಡೆದು ದುರುಪಯೋಗ ಮಾಡಿದ್ದಾರೆ.
ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಇದ್ದಾಗ ಅನೇಕ ಅಭಿವೃದ್ಧಿ ನಿಗಮಗಳನ್ನು ಮಾಡಿದ್ದಾರೆ. ಅದೇರೀತಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪಿಸಿ, ನೂರಾರು ಕೋಟಿ ರೂಪಾಯಿ ಕೊಟ್ಟು ವಾಲ್ಮೀಕಿ ಸಮುದಾಯ, ಬಡ ಮಕ್ಕಳಿಗೆ ನ್ಯಾಯ ದೊರಕಿಸಲು ಶ್ರಮಿಸಿದ್ದರು ಎಂದರು.
ಬಿಜೆಪಿ ತೀವ್ರ ಹೋರಾಟದ ಬಳಿಕ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಎಸ್‍ಐಟಿ ಇಲ್ಲಿನವರೆಗೆ ನಾಗೇಂದ್ರರನ್ನು ತನಿಖೆಗೆ ಕರೆದಿಲ್ಲ ಎಂದು ಆಕ್ಷೇಪಿಸಿದರು. ಇದು ಕೇವಲ ನಾಗೇಂದ್ರರು ಮಾಡಿದ ತಪ್ಪಲ್ಲ. ಸ್ವತಃ ಹಣಕಾಸಿನ ಇಲಾಖೆ ನಿರ್ವಹಿಸುವ ಮುಖ್ಯಮಂತ್ರಿಗಳು ಮಾಡಿದ ತಪ್ಪು. ಮುಖ್ಯಮಂತ್ರಿಗಳ ಅನುಮತಿ ಇಲ್ಲದೆ, ಲೋಕಸಭಾ ಚುನಾವಣೆ ನಡೆಯುತ್ತಿದ್ದಾಗ 187 ಕೋಟಿಯನ್ನು ನಿಗಮಕ್ಕೆ ವರ್ಗಾಯಿಸಿ, ಅಲ್ಲಿಂದ ಹೊರರಾಜ್ಯಕ್ಕೆ ಕಳಿಸಿದ್ದಾರೆ. ಲೋಕಸಭಾ ಚುನಾವಣೆಗೆ ಕರ್ನಾಟಕವನ್ನು ಎಟಿಎಂ ಆಗಿ ಬಳಸಿಕೊಂಡಿದ್ದಾರೆ ಎಂಬ ಮಾಹಿತಿ ಪತ್ರಿಕೆಗಳಲ್ಲಿ ಹೊರಬರುತ್ತಿದೆ ಎಂದು ನುಡಿದರು.
ಲೋಕಸಭಾ ಚುನಾವಣೆಗೆ ನಮ್ಮ ರಾಜ್ಯವನ್ನು ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಮತ್ತಿತರ ನಾಯಕರ ಎಟಿಎಂ ಆಗಿ ಮಾಡಿದ್ದಾರೆ ಎಂದು ದೂರಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕ್ಕೂ ಕನ್ನ ಹಾಕಿದ್ದಾರೆ ಎಂದು ಟೀಕಿಸಿದರು. ಇದು ಸಿಎಂ ಅವರ ಗಮನಕ್ಕೆ ಬಾರದೆ ಆಗಲು ಅಸಾಧ್ಯ ಎಂದರು.
ಸಚಿವ ಶರಣಪ್ರಕಾಶ ಪಾಟೀಲ್, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮತ್ತು ಮುಖ್ಯಮಂತ್ರಿಗಳು ಜವಾಬ್ದಾರಿ ಹೊತ್ತು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಪೆಟ್ರೋಲ್, ಡೀಸೆಲ್, ಹಾಲು ಮೊದಲಾದವುಗಳ ದರ ಏರಿಕೆಯೂ ಖಂಡನೀಯ. ಇದು ಕಾಂಗ್ರೆಸ್ಸಿನ ಜನವಿರೋಧಿ ನೀತಿ ಎಂದು ಟೀಕಿಸಿದರು.