ಬೆಂಗಳೂರು(ಮಾ.7): ಬೆಂಗಳೂರಿನ ಸಿ.ವಿ. ರಾಮನ್ ನಗರದ ಮ್ಯಾನ್ ಹೋಲ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಹಾರ ಘೋಷಿಸಲಾಗಿದೆ.
ಘಟನಾ ಸ್ಥಳಕ್ಕೆ ಮೇಯರ್ ಪದ್ಮಾವತಿ ಮತ್ತು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಸಚಿವ ಜಾರ್ಜ್, ಅಧಿಕಾರಿಗಳ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ. ಬಿಡಬ್ಲ್ಯೂಎಸ್ಎಸ್ಬಿ ವತಿಯಿಂದಲೇ ಪರಿಹಾರ ನೀಡುತ್ತಿದ್ದು, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದರು.
ಮೃತ ಕಾರ್ಮಿಕರನ್ನ ಆಂಧ್ರ ಮೂಲದ ಆಂಜನೇಯರೆಡ್ಡಿ, ವೀರಯ್ಯ ತಾವತ್ತಿನ್ ನಾಯ್ಡು ಎಂದು ಗುರ್ತಿಸಲಾಗಿದೆ. ಘಟನೆ ಕುರಿತಂತೆ ತನಿಖೆಗೆ ಆದೇಶಿಸಿರುವ ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ತುಷಾರ್ ಗಿರಿನಾಥ್, ವರದಿ ನೀಡುವಂತೆ ಯೋಜನಾ ವಿಭಾಗದ ಮುಖ್ಯ ಇಂಜಿನಿಯರ್ ಮಂಜುನಾಥ್`ಗೆ ಆದೇಶಿಸಿದ್ದಾರೆ.
ಮ್ಯಾನ್ ಹೋಲ್`ಗೆ ಕಾರ್ಮಿಕರನ್ನ ಇಳಿಸಬಾರದು ಎಂಬ ಕಾನೂನಿದ್ದರೂ ಪದೇ ಪದೇ ಈ ರೀತಿಯ ದುರಂತಗಳು ನಡೆಯುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.