ಬೆಂಗಳೂರು : ಗೃಹ ಸಚಿವ ಎಂ.ಬಿ. ಪಾಟೀಲ್, ಬಿ.ಎಸ್. ಯಡಿಯೂರಪ್ಪ ಸಿಎಂ ಆಗಲು ಸಹಾಯ ಮಾಡಲಿ ಎಂಬ ಸಿಟಿ ರವಿ ಹೇಳಿಕೆಗೆ ಇದೀಗ ಗೃಹ ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಕೆಡವಿ ತಾವೇ ಸರ್ಕಾರ ರಚಿಸಲು ಬಿಜೆಪಿ ಸಾಕಷ್ಟು ಕಸರತ್ತು ನಡೆಸುತ್ತಿದ್ದು, ಈ ನಡುವೆ ಬಿಜೆಪಿ ಮುಖಂಡ ಸಿ.ಟಿ. ರವಿ "ಗೃಹ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಲಿಂಗಾಯಿತರ ಪರ ಕಾಳಜಿ ಇದ್ದರೆ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಲು ಸಹಾಯ ಮಾಡಲಿ" ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಎಂ.ಬಿ. ಪಾಟೀಲ್ , "ಬಿ. ಎಸ್. ಯಡ್ಯೂರಪ್ಪ ಒಂದು ಪಕ್ಷದಲ್ಲಿ ನಾನೊಂದು ಪಕ್ಷದಲ್ಲಿದ್ದರೆ, ಅವರು ಸಿಎಂ ಆಗಲು ನಾನು ಹೇಗೆ ಸಹಾಯ ಮಾಡಲು ಸಾಧ್ಯ? ಹೀಗಾಗಿ ಯಡಿಯೂರಪ್ಪ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಲು ನಾನು ಖಂಡಿತ ಸಹಾಯ ಮಾಡುತ್ತೇನೆ" ಎಂದು ತಿರುಗೇಟು ನೀಡಿದ್ದಾರೆ.