ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ದಲಿತ ಕುಟುಂಬದವರಿಗೆ ವಿಶೇಷ ಭೋಜನಕೂಟ ಏರ್ಪಡಿಸಿದ್ದರು.
ಬಿಜೆಪಿಯ ಜನ ಸಂಪರ್ಕ ಅಭಿಯಾನದ ಸಂದರ್ಭದಲ್ಲಿ ತಮಗೆ ಆತಿಥ್ಯ ನೀಡಿದ್ದ 33 ದಲಿತ ಕುಟುಂಬಗಳನ್ನ ಆಹ್ವಾನಿಸಿದ್ದ ಬಿಎಸ್ ವೈ, ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದರು. ಹೋಳಿಗೆ ಊಟದೊಂದಿಗೆ ಔತಣಕೂಟದಲ್ಲಿ 18 ಬಗೆಯ ಸಾಂಪ್ರದಾಯಿಕ ಖಾದ್ಯ ಬಡಿಸಲಾಯಿತು. ಖುದ್ದು ಬಿಎಸ್ ವೈ ಊಟ ಬಡಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಆಗಮಿಸಿದ್ದ ಚಿತ್ರದುರ್ಗ ಮಾದಾರ ಚೆನ್ನಯ್ಯ ಸ್ವಾಮೀಜಿ ಕುಳಿತು ತಾವು ಅಲ್ಲಿಯೇ ಊಟ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಎಸ್ ವೈ, ಇದು ತಮ್ಮ ಜೀವನದಲ್ಲಿ ಎಂದೂ ಮರೆಯಲಾಗದ ಅತ್ಯಂತ ಶುಭ ದಿವಸ ಎಂದು ಬಣ್ಣಿಸಿದ್ದಾರೆ. ತಾವು ದಲಿತರ ಕಾಲೋನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸ್ಥಿತಿಗತಿಯನ್ನು ಕಣ್ಣಾರೆ ಕಂಡಿದ್ದು, ಅವರ ಸಮಸ್ಯೆಗಳ ನಿವಾರಣೆಗೆ ತಮ್ಮ ಜೀವನವನ್ನೇ ಮುಡುಪಾಗಿಡುವುದಾಗಿ ಹೇಳಿದರು. ತಾವು ಅಧಿಕಾರದಲ್ಲಿದ್ದಾಗ ಜಾತಿ, ಕುಲ ಎಂದು ಭೇದ ಭಾವ ಮಾಡದೆ ಎಲ್ಲರ ಅಭಿವೃದ್ಧಿಗಾಗಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದನ್ನು ಸ್ಮರಿಸಿದರು. ತಮ್ಮ ದಲಿತ ಕಾಲೋನಿ ಭೇಟಿ ಸಂದರ್ಭದಲ್ಲಿ ಯಾವ ಬೆದರಿಕೆಗೂ ಜಗ್ಗದೆ ತಮಗೆ ಆತಿಥ್ಯ ನೀಡಿದ ದಲಿತರನ್ನು ತಮ್ಮ ಕೊನೆಯ ಉಸಿರಿನವರೆಗೂ ಮರೆಯುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಸಿ.ಎಂ.ಉದಾಸಿ, ಗೋವಿಂದ ಕಾರಜೋಳ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗವಹಿಸಿದ್ದರು. ಇದೇವೇಳೆ ಮೊದಲ ಬಾರಿ ಭೇಟಿ ನೀಡಿದ ಅನೇಕ ದಲಿತ ಕುಟುಂಬಗಳಿಗೆ ಬೆಂಗಳೂರಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ದರ್ಶನ ಮಾಡಿಸುವ ವ್ಯವಸ್ಥೆ ಮಾಡಲಾಗಿತ್ತು.