ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಮುಖ್ಯಮಂತ್ರಿ ಆಗುತ್ತೇನೆಂದು ನಾನೇಲ್ಲಿ ಹೇಳಿದ್ದೇನೆ ಎಂದು ಮರು ಪ್ರಶ್ನಿಸಿರುವ ಅವರು, ಹೆಚ್ಡಿಕೆ ಬಗ್ಗೆ ಇನ್ಮುಂದೆ ಮಾತನಾಡುವುದಿಲ್ಲ ಎಂದು ಹೊಸ ವರಸೆ ತೆಗೆದಿದ್ದಾರೆ.
ನಾನು ಮುಖ್ಯಮಂತ್ರಿ ಆಗುತ್ತೇನೆಂದು ನಾನೇಲ್ಲಿ ಹೇಳಿದ್ದೇನೆ ಎಂದು ಬಿ.ಎಸ್.ಯಡಿಯೂರಪ್ಪ ಕೇಳಿದ್ದಾರೆ. ವಿರೋಧ ಪಕ್ಷದಲ್ಲಿದ್ದು ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯನವರು ಇಲ್ಲ ಸಲ್ಲದ ಊಹೆ ಮಾಡಿಕೊಂಡು ಮಾತನಾಡಿದರೆ ಏನು ಬಂತು ಎಂದು ಖಾರವಾಗಿ ಕೇಳಿದ್ದಾರೆ.
ಇನ್ನೂ ಮುಂದೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ನಾನು ಏನು ಮಾತನಾಡಬಾರದೆಂದು ತೀರ್ಮಾನ ಮಾಡಿದ್ದೇನೆ. ದಿನಕ್ಕೊಂದು ಹೇಳಿಕೆ ಕೊಟ್ಟು ಗೊಂದಲ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳಾಗಿ ಅವರ ಕರ್ತವ್ಯ ನಿರ್ವಹಿಸಬೇಕೆ ಹೊರತು ಯಡಿಯೂರಪ್ಪ ಅವರನ್ನ ಟೀಕೆ ಮಾಡುವುದರಿಂದ ಏನು ಲಾಭ ಇದೆ ಎಂದರು.
ಸುರೇಶ್ ಗೌಡ ಅವರಿಗೆ ಆಫರ್ ಮಾಡಿದ್ದರೆ ಮುಖ್ಯಮಂತ್ರಿ ದಾಖಲೆ ಇದೆ ಎನ್ನುತ್ತಾರೆ. ಇದ್ದರೆ ಬಿಡುಗಡೆ ಮಾಡಲಿ.
ರಾಜ್ಯದ ಆರುವರೆ ಕೋಟಿ ಜನರಿಗೆ ಗೊತ್ತಾಗುತ್ತೆ ಸತ್ಯಾಸತ್ಯತೆ ಏನು ಅಂತ. ಸುಳ್ಳು ಆರೋಪ ಮಾಡುವುದು ಬಿಟ್ಟು ಮುಖ್ಯಮಂತ್ರಿಯಾಗಿ ರೆಕಾರ್ಡ್ ಆಗಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಮುಂಬೈಗೆ ಶಾಸಕರು ಹೋಗಿರುವುದು ಕಾಂಗ್ರೇಸ್ , ಜೆಡಿಎಸ್ ಗೆ ಸಂಬಂಧಪಟ್ಟ ವಿಷಯ. ಬಿಜೆಪಿ ಶಾಸಕ ಸುಭಾಷ್ ಗುತ್ತೇಧಾರ್ ಅವರಿಗೆ ಸ್ವತಃ ಮುಖ್ಯಮಂತ್ರಿಗಳೇ ಕರೆದು ಮಂತ್ರಿ ಮಾಡುತ್ತೇವೆ ಎಂದಿದ್ದಾರೆ. ನಾವು ಯಾರನ್ನೂ ಕರೆಯದೇ ಅವರು ಕರೆದು ನಮ್ಮ ಮೇಲೆ ಆರೋಪ ಮಾಡಿದರೆ ಹೇಗೆ ಎಂದರು.
ಕೂಸು ಹುಟ್ಟಿವ ಮುನ್ನವೇ ಕುಲಾವಿ ಅನ್ನುವಂತೆ ಸರ್ಕಾರ ರಚನೆ ಬಗ್ಗೆ ಯಾಕೆ ಊಹೆ ಮಾಡಬೇಕು ಎಂದು ಸಿರಿಗೆರೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.