Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೊಮ್ಮಾಯಿ!

ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೊಮ್ಮಾಯಿ!
ಬೆಂಗಳೂರು , ಬುಧವಾರ, 28 ಜುಲೈ 2021 (14:08 IST)
ಬೆಂಗಳೂರು(ಜು.28): ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಪುತ್ರ, ಬಸವರಾಜ ಬೊಮ್ಮಾಯಿು ಕರುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ರಾಜಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಅವರು ಅಧಿಕಾರ ವಹಿಸಿದ್ದಾರೆ.

* ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಪುತ್ರ ರಾಜ್ಯದ ನೂತನ ಸಿಎಂ
* ಯಡಿಯೂರಪ್ಪ ಉತ್ತರಾಧಿಕಾರಿಯಾಗಿ ಬಿಜೆಪಿಯ ಸರ್ವಸಮ್ಮತ ಆಯ್ಕೆ
* ಕರ್ನಾಟಕದ 30ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿ
* ಬಿಎಸ್ವೈರಿಂದ ತೆರವಾದ ಸ್ಥಾನಕ್ಕೆ ಲಿಂಗಾಯತರಿಗೇ ಮಣೆ

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೊಮ್ಮಾಯಿ ಅವರು 30ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಥಾವರ್ಚಂದ್ ಗೆಹಲೋತ್ ಅವರು ಪ್ರಮಾಣ ವಚನ ಬೋಧಿಸಿದ್ದಾರೆ. ಅವರೊಬ್ಬರೇ ಶಪಥ ಸ್ವೀಕರಿಸಿದ್ದು, ಮೂರ್ನಾಲ್ಕು ದಿನಗಳ ಬಳಿಕ ಸಂಪುಟ ವಿಸ್ತರಣೆ ಕೈಗೊಳ್ಳುವ ಸಾಧ್ಯತೆಯಿದೆ. ಇನ್ನು ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಹಾಗೂ ಪ್ರಮಾಣವಚನ ಸುಗಮವಾಗಿ ನಡೆದಿರುವುದರಿಂದ ಉಪಮುಖ್ಯಮಂತ್ರಿ ಹಾಗೂ ಸಚಿವರು ಯಾರಾಗಬೇಕು ಎಂಬುದರ ಬಗ್ಗೆ ವರಿಷ್ಠರು ರಾಜ್ಯ ನಾಯಕರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಬಳಿಕ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಬೆಲ್ಲದ್, ಯತ್ನಾಳ್ ಗೈರು
ರಾಜಭವನದಲ್ಲಿ ಆಯೋಜಿಸಿದ್ದ ಸರಳ ಸಮಾರಂಭಕ್ಕೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ ಸೇರಿ ಬಿಜೆಪಿ ಗಣ್ಯ ನಾಯಕರು ಹಾಜರಿದ್ದರು. ಆದರೆ ಸಿಎಂ ರೇಸ್ನಲ್ಲಿದ್ದ ಅರವಿಂದ ಬೆಲ್ಲದ್ ಗೈರಾಗಿದ್ದರು ಎಂಬುವುದು ಉಲ್ಲೇಖನೀಯ. 
ಬಿಎಸ್ವೈ ‘ಮಾನಸ ಪುತ್ರ’
ಲಿಂಗಾಯತ ಸಮುದಾಯದ ಬಿ.ಎಸ್.ಯಡಿಯೂರಪ್ಪ ಅವರ ನಿರ್ಗಮನದ ಹಿನ್ನೆಲೆಯಲ್ಲಿ ಉಂಟಾಗಬಹುದಾದ ನಷ್ಟವನ್ನು ಭರಿಸುವ ಉದ್ದೇಶದಿಂದ ಮತ್ತೆ ಲಿಂಗಾಯತರಿಗೆ ಮಣೆ ಹಾಕಿರುವ ಆಡಳಿತಾರೂಢ ಬಿಜೆಪಿಯು ಯಡಿಯೂರಪ್ಪ ಅವರ ‘ಮಾನಸ ಪುತ್ರ’ ಎಂದೇ ಗುರುತಿಸಲ್ಪಡುವ ಬಸವರಾಜ ಬೊಮ್ಮಾಯಿ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿಸಿದ್ದಾರೆ. ಬೊಮ್ಮಾಯಿ ಆಯ್ಕೆಯಿಂದ ಸಂಘ ಮೂಲದವರಿಗೇ ಮುಂದಿನ ಮುಖ್ಯಮಂತ್ರಿ ಪಟ್ಟ ನೀಡಬೇಕು ಎಂಬ ಪಕ್ಷದ ಹಲವರ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಿದೆ. ಜನತಾ ಪರಿವಾರದಿಂದ ವಲಸೆ ಬಂದಿರುವ ಬೊಮ್ಮಾಯಿ ಅವರಿಗೆ ಮಣೆ ಹಾಕುವ ಅನಿವಾರ್ಯ ಸ್ಥಿತಿ ಬಂದೊದಗಿದ್ದು ಹಂಗಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಗ್ಗಳಿಕೆ.'
ಇನ್ನು ಪ್ರಮಾಣವಚನಕ್ಕೂ ಮುನ್ನ, ಬೆಳಗ್ಗೆ ಬಸವರಾಜ ಬೊಮ್ಮಾಯಿ ಕಾವೇರಿ ನಿವಾಸಕ್ಕೆ ತೆರಳಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಬಿಎಸ್ವೈ ಬೊಮ್ಮಾಯಿಗೆ ಬೆನ್ನು ತಟ್ಟಿ ಅಶಿರ್ವಾದ ನೀಡಿದ್ದಾರೆ.
ತಂದೆಯ ಗರಡಿ:
ಬಸವರಾಜ ಬೊಮ್ಮಾಯಿ ರಾಜಕೀಯ ಕುಟುಂಬದಿಂದ ಬಂದವರು. ತಂದೆ, ಮಾಜಿ ಮುಖ್ಯಮಂತ್ರಿ ದಿ. ಎಸ್.ಆರ್. ಬೊಮ್ಮಾಯಿ ಗರಡಿಯಲ್ಲಿ ಪಳಗಿದವರು. ತಂದೆಯವರು ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುತ್ತಲೇ ರಾಜಕೀಯ ಪ್ರವೇಶಿಸಿ ಹಲವಾರು ಹೋರಾಟದಲ್ಲಿ ಪಾಲ್ಗೊಂಡವರು ಬಸವರಾಜ ಬೊಮ್ಮಾಯಿ. ತಂದೆ ಸಿಎಂ ಆಗಿದ್ದರೂ ಯಾವುದೇ ಹಮ್ಮು ಬಿಮ್ಮುಗಳನ್ನು ತೋರಿಸದೆ ಸಾಮಾನ್ಯ ಕಾರ್ಯಕರ್ತನಂತೆ ಪಕ್ಷದಲ್ಲಿ ದುಡಿಯುತ್ತಾ, ಹತ್ತಾರು ಹೋರಾಟಗಳನ್ನು ಮಾಡುತ್ತಾ ರಾಜಕೀಯದಲ್ಲಿ ಹಂತ ಹಂತವಾಗಿ ಬೆಳೆದವರು. ಮಹದಾಯಿ ಹೋರಾಟದಲ್ಲಿ ಬೊಮ್ಮಾಯಿ ಅವರದ್ದು ದೊಡ್ಡ ಕೊಡುಗೆಯಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಮೊದಲಿನಿಂದಲೂ ಗಟ್ಟಿಧ್ವನಿಯಂತೆ ಕಾರ್ಯನಿರ್ವಹಿಸಿದವರು ಬೊಮ್ಮಾಯಿ. ವಿಧಾನಸೌಧದೊಳಗೆ ಹಾಗೂ ಹೊರಗೂ ಈ ಭಾಗದ ಧ್ವನಿಯಾಗಿ ಕೆಲಸ ಮಾಡಿದವರು.
ಮೂಲತಃ ಜನತಾ ಪರಿವಾರದಿಂದ ಬಂದ ಬಸವರಾಜ ಬೊಮ್ಮಾಯಿ ಇದೀಗ ಬಿಜೆಪಿಯಲ್ಲಿದ್ದಾರೆ. 2008ರಲ್ಲಿ ಬಿಜೆಪಿ ಸೇರಿರುವ ಬೊಮ್ಮಾಯಿ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ತಂದೆ ಕ್ಷೇತ್ರ ಒಲಿಯಲಿಲ್ಲ:
ಬಸವರಾಜ ಬೊಮ್ಮಾಯಿ ತಂದೆ ದಿ.ಎಸ್.ಆರ್.ಬೊಮ್ಮಾಯಿ ಅವರು ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದರು. 1994ರಲ್ಲಿ ಇದೇ ಗ್ರಾಮೀಣ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಅದೃಷ್ಟಪರೀಕ್ಷಿಸಿದ್ದರು. ಜೊತೆಗೆ ವಿಧಾನಸಭೆಗೆ ಅದೇ ಪ್ರಥಮ ಪ್ರಯತ್ನ ಕೂಡ ಆಗಿತ್ತು. ಆದರೆ, ಆಗ ಗೆಲುವು ಸಾಧ್ಯವಾಗಿರಲಿಲ್ಲ. ಜಗದೀಶ ಶೆಟ್ಟರ್ ವಿರುದ್ಧ ಸೋಲನುಭವಿಸಿದ್ದರು. ಇದೀಗ ತಂದೆ ಕ್ಷೇತ್ರ ಒಲಿಯದಿದ್ದರೂ ತಂದೆ ಅನುಭವಿಸಿದ್ದ ಮುಖ್ಯಮಂತ್ರಿ ಹುದ್ದೆ ಒಲಿದು ಬಂದಂತಾಯಿತು.
ಇನ್ನು ಬಸವರಾಜ ಬೊಮ್ಮಾಯಿ ಕ್ಷೇತ್ರ ಹಾವೇರಿ ಜಿಲ್ಲೆಯ ಶಿಗ್ಗಾಂವಿ- ಸವಣೂರು ಆದರೂ ಅವರ ವಾಸ್ತವ್ಯ ಮಾತ್ರ ಹುಬ್ಬಳ್ಳಿಯಲ್ಲಿಯೇ. ಹೀಗಾಗಿ ಧಾರವಾಡ ಜಿಲ್ಲೆಯ 3ನೇ ಮುಖ್ಯಮಂತ್ರಿಯಾದಂತಾಗಿದೆ. ಈ ಮೊದಲು ಎಸ್.ಆರ್. ಬೊಮ್ಮಾಯಿ, ಜಗದೀಶ ಶೆಟ್ಟರ್ ಸಿಎಂ ಆಗಿದ್ದರು.
ಎಷ್ಟುಜನ ಡಿಸಿಎಂ ಇರ್ತಾರೆ?
ಬಿಎಸ್ವೈ ಸಂಪುಟದಲ್ಲಿ ಮೂವರು ಉಪಮುಖ್ಯಮಂತ್ರಿಗಳಿದ್ದರು. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಎಷ್ಟು ಜನ ಇರುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಆದರೀಗ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು
3-4 ದಿನದಲ್ಲಿ ಸಂಪುಟ ರಚನೆ?
ಬುಧವಾರ ಬಸವರಾಜ ಬೊಮ್ಮಾಯಿ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದು, ಸಚಿವ ಸಂಪುಟ ರಚನೆ ಬಗ್ಗೆ ಆ ಬಳಿಕ ಪಕ್ಷದ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಜೊತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ನೂತನ ಸಚಿವ ಸಂಪುಟ ರಚನೆ ಆಗುವ ಸಾಧ್ಯತೆ ಇದೆ.
ಕೋವಿಡ್, ಪ್ರವಾಹ ನಿರ್ವಹಣೆಗೆ ಆದ್ಯತೆ
ಮೋದಿ, ನಡ್ಡಾ, ಅಮಿತ್ ಶಾ ಮತ್ತಿತರ ನಾಯಕರ ಆಶೀರ್ವಾದದಿಂದ ಬಿಜೆಪಿ ಶಾಸಕಾಂಗ ನಾಯಕನಾಗಿ ಆಯ್ಕೆಯಾಗಿದ್ದೇನೆ. ನನ್ನನ್ನು ಸರ್ವಾನುಮತದಿಂದ ಆರಿಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ರಾಜಕೀಯ ಗುರು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಜನಪರ ಆಡಳಿತ ನಡೆಸುತ್ತೇನೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣ, ಪ್ರವಾಹ ನಿರ್ವಹಣೆ ನನ್ನ ಮೊದಲ ಆದ್ಯತೆ ಆಗಿರಲಿದೆ. ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಲು ಸಕಲ ಕ್ರಮಗಳನ್ನು ಕೈಗೊಳ್ಳುತ್ತೇನೆ. ಕರ್ನಾಟಕವನ್ನು ಎಲ್ಲ ಕ್ಷೇತ್ರಗಳಲ್ಲೂ ಉನ್ನತ ಸ್ಥಾನಕ್ಕೆ ಒಯ್ಯಲು ಹಗಲಿರುಳು ಶ್ರಮಿಸುತ್ತೇನೆ.


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಮೇಲಿನ ಸಿಟ್ಟಿಗೆ ಮಗು ಕೊಂದ ಪಾಪಿ ತಂದೆ