ಬೆಂಗಳೂರು (ಜು.29): ನಿಮಗೆ ಒಳ್ಳೆಯ ಪುರೋಹಿತರು ಗೊತ್ತಿದ್ದಾರೆಯೇ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಬಸವರಾಜ ಬೊಮ್ಮಾಯಿ ಅವರನ್ನು ಕೇಳಿದಾಗಲೇ ಅವರಿಗೆ ತಾವು ಮುಖ್ಯಮಂತ್ರಿಯಾಗುತ್ತಿದ್ದೇನೆ ಎಂಬ ಮಾಹಿತಿ ಖಚಿತವಾಗಿತ್ತು.
•ನಿಮಗೆ ಒಳ್ಳೆಯ ಪುರೋಹಿತರು ಗೊತ್ತಿದ್ದಾರೆಯೇ ಎಂದು ಕೇಳಿದ್ದ ಅರುಣ್ ಸಿಂಗ್
•ಕೇಳಿದಾಗಲೇ ಬೊಮ್ಮಾಯಿಗೆ ತಾವು ಮುಖ್ಯಮಂತ್ರಿಯಾಗುತ್ತಿದ್ದೇನೆ ಎಂಬ ಮಾಹಿತಿ
ಮಂಗಳವಾರ ಮಧ್ಯಾಹ್ನ ವೀಕ್ಷಕರಾಗಿ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕುಮಾರ ಕೃಪ ಅತಿಥಿಗೃಹದಲ್ಲಿ ಕುಳಿತು ದೆಹಲಿಯಿಂದ ಹೈ ಕಮಾಂಡ್ ಸಂದೇಶಕ್ಕಾಗಿ ಕಾಯುತ್ತಿದ್ದರು. ಅಂತಿಮವಾಗಿ ಯಾರು ಮುಖ್ಯಮಂತ್ರಿಯಾಗಬಹುದು ಎಂಬುದರ ಬಗ್ಗೆ ಅವರಿಗೂ ಅಧಿಕೃತ ಮಾಹಿತಿ ಇರಲಿಲ್ಲ.
ದೃಶ್ಯ ಮಾಧ್ಯಮಗಳಲ್ಲಿ ಅರವಿಂದ್ ಬೆಲ್ಲದ, ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿತ್ತು, ಈ ನಡುವೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹಂಗಾಮಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಂದರೂ ಪ್ರಧಾನಿ ತೆರಳಲಿಲ್ಲ.
ಸಂಜೆ ಶಾಸಕಾಂಗ ಸಭೆಗೂ ಕೆಲ ಗೊತ್ತು ಮುಂಚೆ ಧರ್ಮೇಂದ್ರ ಪ್ರಧಾನ್ ಅವರಿಗೆ ಹೈ ಕಮಾಂಡ್ನಿಂದ ಬೊಮ್ಮಾಯಿ ಅವರೇ ಮುಂದಿನ ಸಿಎಂ ಎಂಬ ಸಂದೇಶ ಬಂತು ಬಳಿಕ ಅರುಣ್ ಸಿಂಗ್ ಅವರು ಸಭೆ ಆರಂಭವಾಗುವ ಮೊದಲು ಬೊಮ್ಮಾಯಿ ಅವರ ಬಳಿ ಬಂದು ನಿಮಗೆ ಒಳ್ಳೆಯ ಪುರೋಹಿತರು ಗೊತ್ತಿದ್ದಾರೆಯೇ ಎಂದು ನಗುತ್ತ ಪ್ರಶ್ನಿಸಿದ್ದರು. ಇದರಿಂದ ಗೊಂದಲಕ್ಕೆ ಈಡಾದ ಬೊಮ್ಮಾಯಿ ಅಚ್ಚರಿಯಿಂದ ಸಿಂಗ್ ನೋಡಿದರು. ಆಗ ನೀವು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಬೇಕಲ್ಲ ಅದಕ್ಕೆ ಎಂದರು