ಆದಾಯ ತೆರಿಗೆ ದಾಳಿಗೆ ಗುರಿಯಾಗಿದ್ದ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸುವಲ್ಲಿ ರಾಜ್ಯ ಬಿಜೆಪಿ ನಾಯಕರು ವಿಫಲವಾಗಿದ್ದಾರೆ ಎಂದು ಬಿಜೆಪಿ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಸಚಿವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಡೆದ ಐಟಿ ದಾಳಿಯ ಬಗ್ಗೆ ಕಾಂಗ್ರೆಸ್ ನಾಯಕರು ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜ್ಯ ಸರಕಾರ ಭ್ರಷ್ಟರಿಗೆ ರಕ್ಷಣೆ ನೀಡುತ್ತಿದೆ ಎನ್ನುವ ಭಾವನೆಯನ್ನು ಜನತೆಗೆ ಮೂಡಿಸುವಲ್ಲಿ ಬಿಜೆಪಿ ನಾಯಕರು ವಿಫಲವಾಗಿದ್ದಾರೆ ಎಂದು ಹೈಕಮಾಂಡ್ ಬೇಸರಗೊಂಡಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಸರ್ಕಾರದ ಪ್ರಬಲ ಸಚಿವರೊಬ್ಬರು ಭ್ರಷ್ಟಾಚಾರದ ಆರೋಪದ ಸುಳಿಯಲ್ಲಿ ಸಿಲುಕಿರುವಾಗ ಬಿಜೆಪಿ ನಾಯಕರು ಒಗ್ಗಟ್ಟಾಗಿ ಸರಕಾರದ ವಿರುದ್ಧ ಸಮರವೇ ಸಾರಬಹುದಿತ್ತು. ಆದರೆ, ಬಿಜೆಪಿ ನಾಯಕರು ಚಕಾರ ಎತ್ತಲಿಲ್ಲ ಎಂದು ಕೇಂದ್ರ ನಾಯಕರು ಗುಡುಗಿದ್ದಾರೆ.
ಆಗಸ್ಟ್ 12 ರಿಂದ ಮೂರು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಲಿರುವ ಶಾ ಅವರು ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ದುರಾಡಳಿತ ಮತ್ತು ಭ್ರಷ್ಟಾಚಾರ ಬಹಿರಂಗಪಡಿಸಲು ರಾಜಕೀಯ ರಣತಂತ್ರದ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಕಪ್ಪುಹಣ ಮತ್ತು ಭ್ರಷ್ಟಾಚಾರ ನಿರ್ಮೂಲನೆಗಾಗಿ ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡ ಸಂದರ್ಭದಲ್ಲಿ, ಸಚಿವರ ನಿವಾಸದ ಮೇಲೆ ನಡೆದ ಐಟಿ ದಾಳಿಯ ಬಗ್ಗೆ ಬಿಜೆಪಿ ನಾಯಕರು ಮೌನವಾಗಿರುವುದು ಅಚ್ಚರಿ ತಂದಿದೆ. ಟಿವಿ ಚಾನೆಲ್‌ಗಳ ಚರ್ಚಾಕೂಟದಲ್ಲಿ ಬಿಜೆಪಿಯ ಹಿರಿಯ ನಾಯಕರು ಚರ್ಚೆಯಲ್ಲಿ ಪಾಲ್ಗೊಳ್ಳುವುದು ಬಿಟ್ಟು ಕಿರಿಯ ನಾಯಕರಿಗೆ ಅವಕಾಶ ನೀಡಿದ್ದರು.ಇದರಿಂದ ಬಿಜೆಪಿ ಹೈಕಮಾಂಡ್ ಅಸಮಾಧಾನಗೊಂಡಿದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾಗಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.