ಲೋಕಸಭಾ ಚುನಾವಣೆಗೆ ಮುಹೂರ್ತ ಹತ್ತಿರವಾಗುತ್ತಿರುವಾಗಲೇ ಬಿಜೆಪಿ ಸಿದ್ಧತೆಯನ್ನು ತೀವ್ರಗೊಳಿಸಿದೆ.
ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತೆಯರು ಮತ್ತು ನಾಯಕರ ಎರಡು ದಿನಗಳ ರಾಷ್ಟ್ರೀಯ ಸಭೆ ಡಿ. 13ರಿಂದ ಏರ್ಪಡಿಸಲಾಗಿದೆ.
ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮಹಿಳಾ ಕಾರ್ಯಕರ್ತೆಯರು ನಿರ್ವಹಿಸಬೇಕಾದ ಪಾತ್ರ ಹಾಗೂ ರೂಪುರೇಷೆಗಳು, ಚುನಾವಣೆ ಸಿದ್ಧತೆ ಬಗ್ಗೆ ಕಾರ್ಯತಂತ್ರ ರೂಪಿಸಲು ನಾಯಕರು ಮುಂದಾಗಿದ್ದಾರೆ.
ಗಾಂಧಿನಗರ ಜಿಲ್ಲೆಯ ಅದ್ಲಾಜ್ ಗ್ರಾಮದಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆಂದು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವಿಜಯಾ ರಹಟ್ಕರ್ ಗಾಂಧಿನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.