ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಸಂಸದೆ ಶೋಭಾ ಕರದ್ಲಾಂಜೆ ಮೈಸೂರಿನಲ್ಲಿ ನಗುತ್ತಲ್ಲೇ ಮಾರ್ಮಿಕವಾಗಿ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಆಶಾಢ ಮಾಸದ ಎರಡನೇ ಶುಕ್ರವಾರವಾಗಿದ್ದು, ಸಂಸದೆ ಶೋಭಾ ಕರದ್ಲಾಂಜೆ ಚಾಮುಂಡಿ ಬೆಟ್ಟಕ್ಕೆ ತಾಯಿಯ ದರ್ಶನ ಪಡೆಯಲು ಮೆಟ್ಟಿಲುಗಳ ಮೂಲಕ ಹತ್ತುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಬಗ್ಗೆ ಸರ್ವೆ ನಡೆಯುತ್ತಿದೆ. ಬಿ.ಎಸ್ ಯಡಿಯೂರಪ್ಪನವರು ಎಲ್ಲರ ಬಗ್ಗೆ ಚಿಂತನೆಯನ್ನ ಮಾಡುತ್ತಿದ್ದಾರೆ. ಪರಿಸ್ಥಿತಿಯನ್ನ ನೋಡಿಕೊಂಡು ರಾಜ್ಯದ ಬಿಜೆಪಿ ನಿರ್ಧಾರವನ್ನ ತೆಗೆದುಕೊಳ್ಳುತ್ತದೆ. ನೀವು ಸ್ಪರ್ಧೆ ಮಾಡುತ್ತೀರಾ ಎಂಬ ಮಾಧ್ಯಮಗಳ ಮರು ಪ್ರಶ್ನೆಗೆ, ನಾನು ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲವೆಂದು ಹೇಳಿದ್ದೇನೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಇನ್ನೂ ಕೋಡಿ ಮಠದ ಸ್ವಾಮೀಜಿಗಳ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಲೋಲ್ಲ ಕಲೋಲ್ಲವಾಗುತ್ತದೆ ಎಂಬ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ ಕರದ್ಲಾಂಜೆ, ಸ್ವಾಮೀಜಿಗಳ ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಇದೆಲ್ಲದಕ್ಕೂ ಜನ ಬೆಂಬಲ ಮತ್ತು ದೇವರ ಬೆಂಬಲ ಬೇಕು. ನಮಗೆ ಭವಿಷ್ಯದ ಬಗ್ಗೆ ಗೊತ್ತಿಲ್ಲ.
ಭಾರತೀಯ ಜನತಾ ಪಾರ್ಟಿಗೆ ಜನ ಬೆಂಬಲ ಮತ್ತು ದೇವರ ಆಶೀರ್ವಾದವಿದೆ. ರಾಜ್ಯ ಸರ್ಕಾರ ಇನ್ನೂ ಟೇಕ್ ಆಫ್ ಆಗಿಲ್ಲ. ರಾಜ್ಯ ಸರ್ಕಾರಕ್ಕೆ ಸಾಕಷ್ಟು ಅವಕಾಶಗಳನ್ನ ಕೊಟ್ಟಿದ್ದೇವೆ, ಇನ್ನೂ ಟೇಕ್ ಆಫ್ ಆಗಬೇಕು. ಒಳ್ಳೆಯ ಕೆಲಸಗಳನ್ನ ಮಾಡಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿದ್ದಾರೆ. ಒಟ್ಟಾಗಿ ರಾಜ್ಯದ ಕೆಲಸ ಮಾಡುವಂತೆ ಅವಕಾಶಗಳನ್ನ ಕೊಡುತ್ತಿದ್ದೇವೆ ಎಂದು ರಾಜ್ಯ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದರು.