ಬೆಂಗಳೂರು: ರಾಜ್ಯ ಸರ್ಕಾರದ ಮುಡಾ ಹಗರಣದ ವಿರುದ್ಧ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ ಶಾಸಕರು ಸದನದಲ್ಲೇ ನಿನ್ನೆ ರಾತ್ರಿಯಿಡೀ ಕಾಲ ಕಳೆದಿದ್ದಾರೆ. ಭಜನೆ, ಹಾಡು ಹೇಳಿಕೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಳಿಕ ಅಲ್ಲಿಯೇ ಬ್ಲಾಂಕೆಟ್ ಹೊದ್ದು ಮಲಗಿದ್ದಾರೆ.
ಬಿಜೆಪಿ ಶಾಸಕರು ನಿನ್ನೆ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದರು. ಬಳಿಕ ವಿಪಕ್ಷ ನಾಯಕ ಆರ್ ಅಶೋಕ್ ಆದಿಯಾಗಿ ಎಲ್ಲರೂ ಸದನದಲ್ಲೇ ಕಾಲ ಕಳೆದರು. ಈ ವೇಳೆ ಹನುಮಾನ್ ಚಾಲೀಸಾ, ಭಜನೆ, ಹರಿಕತೆ ಮಾದರಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇನ್ನು ರಾತ್ರಿ ಬಿಜೆಪಿ ಶಾಸಕರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿಧಾನಸಭೆಯ ಪಡಸಾಲೆಯಲ್ಲೇ ಕೆಲವು ಹೊತ್ತು ಟಿವಿ ನೋಡುತ್ತಾ, ಮೊಬೈಲ್ ವೀಕ್ಷಿಸುತ್ತಾ ಕಾಲ ಕಳೆದರು. ಶಾಸಕರಿಗಾಗಿಯೇ ಸರ್ಕಾರದ ವತಿಯಿಂದ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ಸಂಜೆಯೇ ಬ್ಲಾಂಕೆಟ್ ಗಳ ರಾಶಿಯೇ ಬಂದಿತ್ತು.
ಅದರಂತೆ ರಾತ್ರಿವರೆಗೂ ಪರಸ್ಪರ ಮಾತನಾಡುತ್ತಾ ಕಾಲ ಕಳೆದ ಶಾಸಕರು ಬಳಿಕ ಅಲ್ಲಿಯೇ ಬ್ಲಾಂಕೆಟ್ ಹೊದ್ದು ಮಲಗಿದ್ದಾರೆ. ಬಿಜೆಪಿ ಶಾಸಕರಿಗೆ ಮಿತ್ರ ಪಕ್ಷ ಜೆಡಿಎಸ್ ಸದಸ್ಯರೂ ಸಾಥ್ ನೀಡಿದ್ದರು. ಇಂದೂ ಸದನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧರಣಿ ಮುಂದುವರಿಯುವ ಸಾಧ್ಯತೆಯಿದೆ.