ಬೆಂಗಳೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನ 5 ಸ್ಟಾರ್ ಹೋಟೆಲ್ನಲ್ಲಿ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶ್ರೀಕಿ ತಂಗಿದ್ದ ಹೋಟೆಲ್ನಲ್ಲಿ ವಿಷ್ಣು ಭಟ್ ಎಂಬಾತ ಆರೋಪಿ ಶ್ರೀಕಿ ಮೇಲೆ ಹಲ್ಲೆಗೆ ಯತ್ನಿಸಿದ್ದ ಎಂದು ಹೇಳಲಾಗಿದೆ. ಈ ಬಗ್ಗೆ ಹೋಟೆಲ್ ಸಿಬ್ಬಂದಿ ಜೀವನ್ ಭೀಮಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಶ್ರೀಕಿ, ಗಲಾಟೆ ಮಾಡಿದ್ದ ವಿಷ್ಣು ಭಟ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಬಿಟ್ ಕಾಯಿನ್ ವಿಚಾರದಲ್ಲಿ ಬೇಕಾಗಿದ್ದ ಆರೋಪಿ ಶ್ರೀಕಿ 2 ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ. ಶ್ರೀಕಿ ಎಲ್ಲಿದ್ದಾನೆ ಎಂದು ಯಾರಿಗೂ ಗೊತ್ತಿರಲಿಲ್ಲ. ಆದರೆ, ಇದೀಗ ಪ್ರಕರಣ ಮತ್ತೆ ಹೊಸ ತಿರುವು ಪಡೆದುಕೊಂಡಿದೆ. 5 ಸ್ಟಾರ್ ಹೋಟೆಲ್ನಲ್ಲಿ ತಂಗಿದ್ದ ಆರೋಪಿ ಶ್ರೀಕಿ ವಶಕ್ಕೆ ಪಡೆಯಲಾಗಿದೆ.
ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಜೀವನ್ ಭೀಮಾನಗರ ಠಾಣೆಯಲ್ಲಿ ಶ್ರೀಕೃಷ್ಣ ವಿಚಾರಣೆ ನಡೆಸಲಾಗಿದೆ. ಡಿಸಿಪಿ ಶರಣಪ್ಪ ಶ್ರೀಕಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಎರಡೂವರೆ ತಿಂಗಳಿಂದ ಶ್ರೀಕಿ ರಾಯಲ್ ಆರ್ಚಿಡ್ 5 ಸ್ಟಾರ್ ಹೋಟೆಲ್‌ನಲ್ಲಿದ್ದ ಎಂದು ತಿಳಿದುಬಂದಿದೆ. ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯ ಹೋಟೆಲ್ ನಲ್ಲಿ ಆತ ತಂಗಿದ್ದ. 3 ದಿನ ಹಿಂದೆ ಶ್ರೀಕಿ ಜೊತೆ ಜ್ಯುವೆಲರಿ ಗ್ರೂಪ್ಸ್ ಮಾಲೀಕನ ಮಗ ಇದ್ದ ಎನ್ನಲಾಗಿದೆ.
ಎಸಿಪಿ ಡಿ.ಕುಮಾರ್ ನೇತೃತ್ವದಲ್ಲಿ ಆರೋಪಿಯ ರೋಮ್ ಪರಿಶೀಲನೆ ನಡೆಸಲಾಗಿದ್ದು, ಲ್ಯಾಪ್ಟಾಪ್, ಟ್ಯಾಬ್ ವಶಕ್ಕೆ ಪಡೆಯಲಾಗಿದೆ.
ಶನಿವಾರ ಮಧ್ಯಾಹ್ನವೂ ಹೋಟೆಲ್ ಸಿಬ್ಬಂದಿ ಜೊತೆ ವಿಷ್ಣುಭಟ್, ಶ್ರೀಕಿ ಗಲಾಟೆ ಮಾಡಿಕೊಂಡಿದ್ದರು. ಸೆಕ್ಯೂರಿಟಿ ಆಫೀಸರ್ ಜತೆಯೂ ಗಲಾಟೆ ಮಾಡಿದ್ದರು ಎಂದು ತಿಳಿದುಬಂದಿದೆ.