ನಗರದ ಉಣಕಲ್‌ನ ದಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಮಂಗಳವಾರ ನಡೆದ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಅವರ ಬರ್ಬರ ಹತ್ಯೆಗೆ, ಆರೋಪಿ ಮಹಾಂತೇಶ ಶಿರೂರ ಮಾರಾಟ ಮಾಡಿದ್ದ ಗುರೂಜಿಗೆ ಸೇರಿದ್ದ ₹5 ಕೋಟಿ ಮೌಲ್ಯದ ಆಸ್ತಿಯೇ ಕಾರಣ ಎನ್ನುವ ಅಂಶ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಇಬ್ಬರೂ, ಸಂಸ್ಥೆ ಹೆಸರಲ್ಲಿ ಹಣ ಪಡೆದು ವಂಚಿಸಿದ್ದರು ಎಂಬ ಕಾರಣಕ್ಕೆ ಗುರೂಜಿ 2016ರಲ್ಲಿ ಇಬ್ಬರನ್ನೂ ಕೆಲಸದಿಂದ ತೆಗೆದಿದ್ದರು. ಆಸ್ತಿ ಹಾಗೂ ಹಣಕಾಸಿನ ವಿಷಯದಲ್ಲಿ ಇಬ್ಬರ ನಡುವೆ ಏರ್ಪಟ್ಟ ಕಲಹವೇ ಹತ್ಯೆಗೆ ಕಾರಣವಾಗಿದೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಮಹಾಂತೇಶ 2008ರಿಂದ ಮುಂಬೈನಲ್ಲಿ ಸರಳವಾಸ್ತು ಸಂಸ್ಥೆ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ. ಗುರೂಜಿ ಆಪ್ತನಾಗಿಯೂ ವಿಶ್ವಾಸ ಗಳಿಸಿದ್ದರಿಂದ, ಮಹಾಂತೇಶ ಮತ್ತು ಅವನ ಪತ್ನಿ ವನಜಾಕ್ಷಿ ಹೆಸರಿನಲ್ಲಿ ಹುಬ್ಬಳ್ಳಿಯ ಕೆಲವೆಡೆ ಗುರೂಜಿ ಆಸ್ತಿ ಮಾಡಿದ್ದರು. ಅಲ್ಲದೆ, ತಮ್ಮ ಹೆಸರಲ್ಲಿ ಮತ್ತು ಅವರ ಆಪ್ತವಲಯದ ಕೆಲವರ ಹೆಸರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಗಳು ತಿಳಿಸಿದ್ದಾರೆ. ಎಸಿಪಿ ವಿನೋದ ಮುಕ್ತೇದಾರ ನೇತೃತ್ವದ ತಂಡ ಅವುಗಳ ಪತ್ತೆಗೆ ಮುಂದಾಗಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.