Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರವಹಿಸಿ: ಪ್ರೀತಿ ಗೆಹ್ಲೋಟ್

ಮಾದರಿ ನೀತಿ ಸಂಹಿತೆ  ಉಲ್ಲಂಘನೆಯಾಗದಂತೆ ಎಚ್ಚರವಹಿಸಿ:  ಪ್ರೀತಿ ಗೆಹ್ಲೋಟ್
bangalore , ಮಂಗಳವಾರ, 11 ಏಪ್ರಿಲ್ 2023 (20:20 IST)
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ  ರಾಜಕೀಯ ಪಕ್ಷದವರಿಗೆ ವಿವಿಧ ಮಾಧ್ಯಮಗಳಲ್ಲಿ  ಭಿತ್ತರಿಸುವ ಜಾಹೀರಾತುಗಳಲ್ಲಿ  ಮಾದರಿ ನೀತಿ ಸಂಹಿತೆ  ಉಲ್ಲಂಘನೆಯಾಗದಂತೆ ಮುಂಜಾಗ್ರತೆವಹಿಸುವಂತೆ ಬಗ್ಗೆ ಜಿಲ್ಲಾ ಎಂಸಿಎಂಸಿ ನೋಡಲ್  ಅಧಿಕಾರಿಯಾದ  ಪ್ರೀತಿ ಗೆಹ್ಲೋಟ್ ರವರು ತಿಳಿಸಿದರು.
 
ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಛೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲುಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಿವಿಧ  ರಾಜಕೀಯ ಪಕ್ಷಗಳು ತಮ್ಮ  ಪಕ್ಷದ ಮತ್ತು ಅಭ್ಯರ್ಥಿಗಳು ಪರ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಧ್ವನಿ/ ದೃಶ್ಯ (ಆಡಿಯೋ  /  ವಿಷುಯಲ್) ಜಾಹೀರಾತುಗಳನ್ನು ಪ್ರಕಟಿಸುವ ಮೊದಲು ಮಾಧ್ಯಮ ಪ್ರಮಾಣೀಕರಣ  ಹಾಗೂ ಮೇಲುಸ್ತುವಾರಿ ಸಮಿತಿಯ ಪೂರ್ವ ಪ್ರಮಾಣೀಕರಣ ಹೊಂದಿರಬೇಕು ಎಂದು ತಿಳಿಸಿದರು.
 
ಯಾವುದೇ ನೋಂದಾಯಿತ  ಹಾಗೂ ಮಾನ್ಯತೆ  ಪಡೆದ ರಾಜಕೀಯ ಪಕ್ಷ/ ಅಭ್ಯರ್ಥಿಯು ಜಾಹೀರಾತು ಪ್ರಸಾರವಾಗುವ 03 ದಿನಗಳ ಮುನ್ನ ಹಾಗೂ ನೋಂದಾಯಿತ, ಮಾನ್ಯವಲ್ಲದ  ರಾಜಕೀಯ ಪಕ್ಷ  ಜಾಹೀರಾತಿಗೆ  ಪೂರ್ವ ಪ್ರಮಾಣೀಕರಣ  ಅರ್ಜಿಯನ್ನು  07 ದಿನಗಳ ಮುಂಚಿತವಾಗಿ ಸಲ್ಲಿಸಬೇಕು ಎಂದರು.
 
ರಾಜಕೀಯ ಪಕ್ಷಗಳು ಜಾಹೀರಾತು ಪೂರ್ವ  ಪ್ರಮಾಣೀಕರಣಕ್ಕಾಗಿ ಜಿಲ್ಲಾ ಎಂ.ಸಿ.ಎಂ.ಸಿ  ಸಮಿತಿಗೆ ಅರ್ಜಿ ಸಲ್ಲಿಸಬಹುದು. ಅಲ್ಲದೇ,  ಬೆಂಗಳೂರು ನಗರ  ಜಿಲ್ಲೆಯಲ್ಲಿರುವ  ಒಟ್ಟು 28 ಕ್ಷೇತ್ರಗಳನ್ನು 04 ವಿಭಾಗಗಳಲ್ಲಿ ವಿಂಗಡಿಸಿ ಆಯಾ ವಿಭಾಗಗಳ ವ್ಯಾಪ್ತಿಗೆ  ಬರುವ  ಕ್ಷೇತ್ರದ  ಅಭ್ಯರ್ಥಿ ಅಥವಾ ಪಕ್ಷ ನಿಗಧಿತ  ವಿಭಾಗದ  ಸಹಾಯಕ  ಜಿಲ್ಲಾ ಚುನಾವಣಾಧಿಕಾರಿಗಳಿಗೆ  ಜಾಹೀರಾತು ಪೂರ್ವ ಪ್ರಮಾಣೀಕರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
 
 
ಸಾಮಾಜಿಕ ಜಾಲತಾಣಗಳಲ್ಲಿ ಸಹ ಪ್ರಸಾರವಾಗುವ  ರಾಜಕೀಯ  ಜಾಹೀರಾತುಗಳಿಗೆ  ಪೂರ್ವ  ಪ್ರಮಾಣೀಕರಣ ಅಗತ್ಯವಿದ್ದು,  ಅದರ  ವೆಚ್ಚದ ಲೆಕ್ಕಪತ್ರವನ್ನು  ಆಯಾ ಅಭ್ಯರ್ಥಿ ಹಾಗೂ ಪಕ್ಷಗಳು ಸಮರ್ಪಕವಾಗಿ  ನಿರ್ವಹಿಸಬೇಕು  ಎಂದ ಅವರು ಚುನಾವಣೆ ನಂತರದ ಆಡಿಟ್ ಸಂದರ್ಭದಲ್ಲಿ ಆದನ್ನು ಪ್ರಸ್ತುತ ಪಡಿಸಬೇಕು ಎಂದರು.
 
ಯಾವುದೇ ಧ್ವನಿ/ದೃಶ್ಯ ಮಾಧ್ಯಮದ ರಾಜಕೀಯ ಜಾಹೀರಾತು /ಪ್ರಚಾರ ವಿಷಯದಲ್ಲಿ  ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ  ಅಂಶಗಳನ್ನು  ಇರಬಾರದು. ಉಲ್ಲಂಘನೆಯಾದ  ಸಂದರ್ಭದಲ್ಲಿ  ಸಂಬಂಧಿಸಿದ ಕ್ಷೇತ್ರ ಚುನಾವಣಾಧಿಕಾರಿಗಳು ಅಂತಹ ಅಭ್ಯರ್ಥಿಗೆ ವಿವರಣೆ ಕೇಳುವ ನೋಟಿಸ್ ಜಾರಿ ಮಾಡುತ್ತಾರೆ ಎಂದರು.
ಸುದ್ಧಿ ಸ್ವರೂಪದ ಬಗ್ಗೆ ವಿವರಿಸಿದ ಅವರು ಜಾಹೀರಾತಿನ  ಪಾವತಿ ವೆಚ್ಚದ ಲೆಕ್ಕ ತಪ್ಪಿಸಲು ರಾಜಕೀಯ  ಪಕ್ಷಗಳು ಸುದ್ಧಿ ರೂಪದಲ್ಲಿ ಪ್ರಚಾರ  ಕೈಗೊಳ್ಳಲು ಪ್ರಯತ್ನಿಸುತ್ತವೆ. ಜಿಲ್ಲಾ ಮಾಧ್ಯಮ  ಮೇಲುಸ್ತುವಾರಿ ತಂಡಗಳು ನಿರಂತರ  ಎಲ್ಲ  ರೀತಿಯ ಮಾಧ್ಯಮ ಪ್ರಸಾರದ ಮೇಲೆ  ನಿಗಾ  ವಹಿಸುತ್ತಿದ್ದು,  ಸಂಶಯಾಸ್ಪದ  ಪಾವತಿ ಸುದ್ದಿ ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದವರು ತಿಳಿಸಿದರು. 
 
ಮಾದರಿ ನೀತಿ ಸಂಹಿತೆ ಅನುಸಾರು, ಪ್ರಚಾರ ಕಾರ್ಯಗಳನ್ನು ನಡೆಸುವ ಮೂಲಕ ಚುನಾವಣೆ ಪ್ರಕ್ರಿಯೆ ಸುಗಮವಾಗಿ  ನಡೆಸಲು ರಾಜಕೀಯ  ಪಕ್ಷಗಳು ಸಹಕರಿಸಬೇಕು  ಎಂದು ಕೋರಿದರು.
 
ಈ ಸಭೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರಾದ ಎಸ್. ರಮೇಶ್, ಕಾಂಗ್ರೆಸ್ ಪಕ್ಷದ  ಪ್ರಶಾಂತ  ಬಿ ಮತ್ತು ಮಹೆಬೂಬ್ ಪಾಷಾ, ಬಿಎಸ್ಪಿ ಪಕ್ಷದ ಅರುಣ ಪ್ರಸಾದ್,  ಜಿಲ್ಲಾ ಎಂಸಿಎಂಸಿ ಸದಸ್ಯ ಕಾರ್ಯದರ್ಶಿಗಳಾದ ಪಲ್ಲವಿ ಹೊನ್ನಾಪುರ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಮೂಲ್​ ವರ್ಸಸ್​ ನಂದಿನಿ ಸಮರ