ಬಾಲನಟನಾಗಿ ಬಹಳ ಚಿಕ್ಕ ವಯಸ್ಸಿನಲ್ಲೇ ರಂಗಭೂಮಿಗೆ ಪದಾರ್ಪಣೆ ಮಾಡಿದ ಅಶ್ವತ್ಥ್ ನಾರಾಯಣ್, 'ವಾಲ್ಮೀಕಿ' ಮೂಲಕ ಚಿತ್ರರಂಗಕ್ಕೆ ನಟನಾಗಿ ಬಂದರು. ತ.ರಾ.ಸು ಅವರ ಕಾದಂಬರಿ ನಿರ್ಮಾಣವಾದ ಡಾ. ರಾಜಕುಮಾರ್ ಅಭಿನಯದ 'ಚಂದವಳ್ಳಿಯ ತೋಟ' ಚಿತ್ರದಲ್ಲಿ, ಅವರು ಸುಬ್ಬಾಭಟ್ಟ ಎಂಬ ನೆಗೆಟಿವ್ ಶೇಡ್ನ ಪಾತ್ರದಲ್ಲಿ ನಟಿಸಿದ್ದಾರೆ. ಇದು ಅವರ ವೃತ್ತಿಬದುಕಿಗೆ ದೊಡ್ಡ ಮಟ್ಟದಲ್ಲಿ ತಿರುವು ಕೊಟ್ಟ ಚಿತ್ರವಾಯಿತು.
ಈ ನಂತರ ಚಿತ್ರದ ಹಲವು ಚಿತ್ರಗಳಲ್ಲಿ, ಡಾ. ರಾಜಕುಮಾರ್ ಅಭಿನಯದ ಹಲವಾರು ಚಿತ್ರಗಳಲ್ಲಿ ಅಶ್ವತ್ಥ್ ನಾರಾಯಣ್ ಪೋಷಕ ಪಾತ್ರಗಳಲ್ಲಿ ನಟಿಸಿದರು. ಬಹುತೇಕ ಚಿತ್ರಗಳಲ್ಲಿ ಅವರು ಅರ್ಚಕರಾಗಿ ನಟಿಸಿದ್ದರು. 'ಬಬ್ರುವಾಹನ', 'ಕವಿರತ್ನ ಕಾಳಿದಾಸ', 'ದಂಗೆ ಎದ್ದ ಮಕ್ಕಳು', 'ತಾಯಿಗೆ ತಕ್ಕ ಮಗ', 'ಅನುರಾಗ ಅರಳಿತು', "ಪ್ರೊಫೆಸರ್ ಹುಚ್ಚೂರಾಯ', 'ಕಾಮನ ಬಿಲ್ಲು' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ. ರಾಜ್ಕುಮಾರ್ ಕುಟುಂಬದ ನಾಲ್ಕು ತಲೆಮಾರಿನ ಕಲಾವಿದರೊಂದಿಗೆ ನಟಿಸಿದ ಹೆಗ್ಗಳಿಕೆ ಅಶ್ವತ್ಥ್ ನಾರಾಯಣ್ ಅವರಿಗಿದೆ. ಡಾ. ರಾಜ್ ಅವರ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಜತೆ ನಟಿಸಿದ್ದ ಅವರು, ರಾಜ್ ಮೊಮ್ಮಗ ವಿನಯ್ ರಾಜಕುಮಾರ್ ಅಭಿನಯದ 'ಸಿದ್ಧಾರ್ಥ' ಚಿತ್ರದಲ್ಲೂ ನಟಿಸಿದ್ದರು. ಇತ್ತೀಚಿನ ದಿನಗಳಲ್ಲಿ ನಟನೆಯಿಂದ ದೂರವಿದ್ದರು.
ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅಶ್ವತ್ಥ್ ನಾರಾಯಣ್ ಅವರು ಭಾನುವಾರ ಬೆಳಗ್ಗೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಇವರು ಮೂವರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.