ಬಾಬರಿ ಮಸೀದಿ ಧ್ವಂಸ ಮಾಡಿ ಡಿ.6ಕ್ಕೆ 26 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವಹಿಂದೂ ಪರಿಷತ್ `ಶೌರ್ಯ’ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ.
ಇದಕ್ಕೆ ಪ್ರತಿಯಾಗಿ ಮುಸ್ಲಿಂ ಸಂಘಟನೆಗಳು `ದುಃಖ’ದ ದಿನವಾಗಿ ಆಚರಿಸಲು ಮುಂದಾಗಿವೆ. ಹೀಗಾಗಿ ಅಯೋಧ್ಯೆ ಮತ್ತು ಫರೀದಾಬಾದ್ನಲ್ಲಿ ಬಿಗುವಿನ ವಾತಾವರಣ ಉಂಟಾಗಲಿರುವ ಹಿನ್ನೆಲೆಯಲ್ಲಿ ಹಿಂದೆಂದೂ ಕಾಣದಂತಹ ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ವಿಶ್ವಹಿಂದೂ ಪರಿಷತ್ ಸೇರಿದಂತೆ ಹಿಂದೂ ಪರ ಸಂಘಟನೆಗಳು ಹಾಗೂ ಮುಸ್ಲಿಂ ಸಂಘಟನೆಗಳ ನಡುವೆ ಈ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡದಂತೆ ಎಚ್ಚರಿಕೆ ವಹಿಸಲು ಮುಂದಾಗಿರುವ ಉತ್ತರಪ್ರದೇಶ ಸರ್ಕಾರ ಭಾರಿ ಬಿಗಿ ಭದ್ರತೆ ಕಲ್ಪಿಸಿ ಪೊಲೀಸರ ಸರ್ಪಗಾವಲು ಹಾಕಿದೆ.
2019ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ರಾಮಮಂದಿರದತ್ತ ನೆಟ್ಟಿದೆ. ಹೀಗಾಗಿಯೇ ಬಾಬರಿ ಮಸೀದಿ ಧ್ವಂಸ ಪ್ರಕರಣದ ವರ್ಷಾಚರಣೆಯನ್ನು ಅದ್ಧೂರಿಯಾಗಿ ಶೌರ್ಯ ದಿನವನ್ನಾಗಿ ಆಚರಿಸಲು ವಿಶ್ವ ಹಿಂದೂ ಪರಿಷತ್ ಮುಂದಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ವಿಶ್ವ ಹಿಂದೂ ಪರಿಷತ್ನ ವಕ್ತಾರ ಶರತ್ ಶರ್ಮಾ, ಅಯೋಧ್ಯೆಯಲ್ಲಿ ನಾಳೆ ಸಾಂಪ್ರದಾಯಿಕವಾಗಿ ಶೌರ್ಯ ದಿನವನ್ನು ಆಚರಿಸಲಾಗುತ್ತಿದೆ. ನಮ್ಮೊಂದಿಗೆ ಹಲವು ಹಿಂದೂ ಪರ ಸಂಘಟನೆಗಳು ಕೈಜೋಡಿಸಲಿದ್ದು, ಶೀಘ್ರವೇ ಧ್ವಂಸವಾಗಿರುವ ಬಾಬರಿ ಮಸೀದಿ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಆಗ್ರಹಿಸಿದರು.