Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಗಮಗಳಲ್ಲಿ ಹಗರಣವಾಗಿದೆ ಎಂದರೆ ಸಿಎಂ ಸಿದ್ದರಾಮಯ್ಯಗೂ ಪಾಲಿರಲೇಬೇಕು: ಬಿ ವೈ ವಿಜಯೇಂದ್ರ

BY vijayendra

Krishnaveni K

ಬೆಂಗಳೂರು , ಶನಿವಾರ, 20 ಜುಲೈ 2024 (16:37 IST)
ಬೆಂಗಳೂರು: ಅಸಮರ್ಥ ಸಿಎಂ ಇದ್ದರೆ ಅಥವಾ ಸಚಿವರ, ಸಿಎಂ ಮೌಖಿಕ ಒಪ್ಪಿಗೆ ಇದ್ದರೆ ಮಾತ್ರ ವಾಲ್ಮೀಕಿ ನಿಗಮದ ಹಣ ದುರುಪಯೋಗದಂಥ ಭ್ರಷ್ಟಾಚಾರದ ಹಗರಣ ನಡೆಯಲು ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದರು.

ಬಳ್ಳಾರಿಯಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಣ ದೋಚಿ ಆ ಹಣದಿಂದ ಹೆಂಡ ಖರೀದಿಸಿ, ಬಳ್ಳಾರಿ ಮತ್ತಿತರ ಕಡೆ ಚುನಾವಣೆ ವೇಳೆ ಬಳಸಿದ್ದಾರೆ. ಅಲ್ಲದೆ, ಹೊರರಾಜ್ಯಗಳಲ್ಲೂ ಬಳಸಿದ್ದಾರೆ ಎಂದು ಇ.ಡಿ. ಹೇಳಿದೆ. ಹಾಗಿದ್ದರೆ ಇದೆಲ್ಲದಕ್ಕೂ ಕೇವಲ ಅಧಿಕಾರಿಗಳು ಹೊಣೆಗಾರರೇ ಎಂದು ಕೇಳಿದರು.

ಅಸ್ತಿತ್ವವೇ ಇಲ್ಲದ ಕಂಪೆನಿ ಹೆಸರಿಗೆ ಹಣ ವರ್ಗಾವಣೆ ಮಾಡಿ, ಅದನ್ನು ವಿತ್‍ಡ್ರಾ ಮಾಡಿ ಹಗರಣ ಮಾಡಿದ್ದಾರೆ. ಬಿಜೆಪಿ ಸರಕಾರದ ಹಗರಣಗಳ ತನಿಖೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಯಾರು ನಿಮ್ಮನ್ನು ತಡೆಯುತ್ತಿದ್ದಾರೆ? ಯಾವುದೇ ಹಗರಣ ಇದ್ದರೂ ತನಿಖೆ ಮಾಡಿ ಎಂದು ಸವಾಲೆಸೆದರು. ಆದರೆ, ನಮ್ಮ ಪ್ರಶ್ನೆಗೆ ಮೊದಲು ಸಿಎಂ ಉತ್ತರಿಸಬೇಕು. ತಾವೇ ಹಣಕಾಸಿನ ಸಚಿವರಾದ ಕಾರಣ ಈ ಹಗರಣಕ್ಕೆ ಸಂಬಂಧಿಸಿ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಮೊನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದಲ್ಲಿ ಶಾಸಕರೆಲ್ಲರೂ ನನ್ನ ರಕ್ಷಣೆಗೆ ಬರಬೇಕು ಎಂದು ಮುಖ್ಯಮಂತ್ರಿ ಕೇಳಿದ್ದಾರೆ. ದಯವಿಟ್ಟು ನನ್ನ ಪರವಾಗಿ ಗಟ್ಟಿಯಾಗಿ ನಿಲ್ಲಬೇಕೆಂದು ಒತ್ತಾಯ ಮಾಡಿದ ಬಳಿಕ ನಿನ್ನೆ ಶಾಸಕರು ಸದನದಲ್ಲಿ ಹಾರಾಡುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
 
ಹಗರಣದಲ್ಲಿ ದೊಡ್ಡ ದೊಡ್ಡ ಹೆಸರುಗಳು..
ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡ ಸುಮಾರು 2 ತಿಂಗಳ ಬಳಿಕ ನಿನ್ನೆ 25 ಲಕ್ಷ ಪರಿಹಾರ ಘೋಷಿಸಿದ್ದಾರೆ. ಬಿಜೆಪಿ ಈ ವಿಚಾರದಲ್ಲಿ ನಿರಂತರವಾಗಿ ಆಗ್ರಹಿಸುತ್ತ ಬಂದಿತ್ತು ಎಂದರು. ವಾಲ್ಮೀಕಿ ನಿಗಮದ ಹಗರಣದಲ್ಲಿ ದೊಡ್ಡ ದೊಡ್ಡ ಹೆಸರುಗಳು ಕೇಳಿಬರುತ್ತಿದೆ. ಕೇವಲ ನಾಗೇಂದ್ರ ರಾಜೀನಾಮೆ, ಅವರ ಕಸ್ಟಡಿಗೆ ಈ ಹಗರಣ ಮುಗಿಯುವುದಿಲ್ಲ ಎಂದು ವಿಜಯೇಂದ್ರ ಅವರು ತಿಳಿಸಿದರು.

ಲ್ಯಾಂಬೊರ್ಗಿನಿ, ಬೆಂಝ್ ಕಾರನ್ನು ವಾಪಸ್ ಕೊಟ್ಟು ಹಣ ತರುವುದಾಗಿ ಹೇಳಿದ್ದಾರೆ. ಅದನ್ನು ನಿಮ್ಮಲ್ಲಿರುವ ಯಾರಿಗೋ ಗಿಫ್ಟ್ ಕೊಡಲು ಖರೀದಿ ಮಾಡಿರಬಹುದಲ್ಲವೇ? ಕದ್ದ ಮಾಲು ವಾಪಸ್ ಬಂದಿದೆ ಎಂದ ಮಾತ್ರಕ್ಕೆ ಬಚಾವಾಗಲು ಸಾಧ್ಯವಿಲ್ಲ. ದುಡ್ಡನ್ನು ಚುನಾವಣೆಗೆ ಬಳಸಿದ್ದಾರೆ. ಸತ್ಯನಾರಾಯಣ ವರ್ಮ ಮನೆಯಲ್ಲಿ 12 ಕೋಟಿ ಸಿಕ್ಕಿದೆ. ಆ ಕುರಿತು ನನಗೇನೋ ಇವತ್ತಿಗೂ ಅನುಮಾನವಿದೆ ಎಂದು ತಿಳಿಸಿದರು. ಸ್ವತಃ ರಾಜ್ಯ ಸರಕಾರ, ಕೆಲವು ಮುಖಂಡರು ಇದರ ನೇತೃತ್ವ ವಹಿಸಿ ವರ್ಮ ಮನೆಯಲ್ಲಿ 12 ಕೋಟಿ ಇಡಿಸಿ ಅವನ ಮನೆಯಲ್ಲೇ ಹಣ ಸಿಕ್ಕಿದೆ ಎಂದು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
 
ಹಣ ವಾಪಸ್ ಬಂದಿದೆ ಎಂದೊಡನೆ ಭ್ರಷ್ಟಾಚಾರ ಹಗರಣ ನಡೆದಿಲ್ಲ ಎನ್ನಲಾದೀತೇ? ಮುಖ್ಯಮಂತ್ರಿಗಳು ಯಾರ ಕಿವಿಗೆ ಹೂ ಮುಡಿಸುವ ಕೆಲಸ ಮಾಡುತ್ತಿದ್ದಾರೆ? ಒಟ್ಟಾರೆಯಾಗಿ ಚಂದ್ರಶೇಖರ್ ಆತ್ಮಹತ್ಯೆಯ ಬಳಿಕ ಈ ಹಗರಣ ಬಯಲಾಗಿದೆ. ಅವರ ಡೆತ್ ನೋಟ್ ಇಲ್ಲದಿದ್ದರೆ ಈ ಹಗರಣ ಬೆಳಕಿಗೆ ಬರುತ್ತಿರಲಿಲ್ಲ ಎಂದು ನುಡಿದರು.

ಇ.ಡಿ., ಸಿಬಿಐ ಮೂಲಕ ಸರಕಾರ ಅಭದ್ರಗೊಳಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಸಿಎಂ ಹೇಳುತ್ತಾರೆ. ಹಿಂದುಳಿದ ವರ್ಗಗಳ ಮುಖ್ಯಮಂತ್ರಿಯ ಸ್ಥಾನ ಅಭದ್ರಗೊಳಿಸುವುದೆಂದು ಯಾಕೆ ಭಾವಿಸುತ್ತೀರಿ? ಭ್ರಷ್ಟಾಚಾರ ಎಂದರೆ ಅದು ಭ್ರಷ್ಟಾಚಾರ ತಾನೇ ಎಂದು ಕೇಳಿದರು.
 
ಗೌರವಯುತವಾಗಿ ರಾಜೀನಾಮೆ ಕೊಡಿ..

ಮಾನ್ಯ ಮುಖ್ಯಮಂತ್ರಿಗಳೇ ನೀವು ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬಂದವರು. ತಾವೇ ಭ್ರಷ್ಟಾಚಾರ ಆದುದನ್ನು ಒಪ್ಪಿಕೊಂಡಿದ್ದೀರಿ. ತಮ್ಮ ಸಂಪುಟದ ಸಚಿವರಾಗಿದ್ದವರು ಇವತ್ತು ಇ.ಡಿ. ಕಸ್ಟಡಿಯಲ್ಲಿದ್ದಾರೆ. ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ಇಂಥ ಹಗರಣ ನಡೆಯಲು ಅಸಾಧ್ಯ. ತಾವು ಗೌರವಯುತವಾಗಿ ರಾಜೀನಾಮೆ ಕೊಡಿ ಎಂದು ವಿನಂತಿ ಮಾಡುತ್ತಿದ್ದೇವೆ ಎಂದು ವಿಜಯೇಂದ್ರ ಅವರು ತಿಳಿಸಿದರು.
 
ಚುನಾವಣೆ ಸಂದರ್ಭದಲ್ಲಿ ಇಲೆಕ್ಷನ್ ಫಂಡ್ ಸಂಬಂಧ ಸಚಿವರಿಗೆ ಟಾರ್ಗೆಟ್ ಕೊಟ್ಟಿದ್ದ ಮಾಹಿತಿ ಇದೆ. ಈ ಒತ್ತಡದಲ್ಲಿ ಹೀಗೆಲ್ಲ ಆಗಿದೆ. ಹಾಗಾಗಿ ಅನುಭವ ಇರುವ ಸತ್ಯನಾರಾಯಣ ವರ್ಮ ಅಂಥವರನ್ನೇ ಬಳಸಿಕೊಂಡಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಲೂಟಿಯಾದ ಹಣವನ್ನು ಬಳ್ಳಾರಿ, ತೆಲಂಗಾಣ ಸೇರಿ ವಿವಿಧೆಡೆ ಲೋಕಸಭಾ ಚುನಾವಣೆಗೆ ಬಳಸಿದ ಮಾಹಿತಿ ಸಿಕ್ಕಿದೆ. ರಾಜ್ಯದಲ್ಲೂ ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಹೈಕಮಾಂಡಿಗೂ ಕೂಡ ತಲುಪಿದ ಮಾಹಿತಿ ಬರುತ್ತಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಸಂಡೂರು ಉಪ ಚುನಾವಣೆಯು ಬಿಜೆಪಿಗೆ ಒಂದು ಸವಾಲಿನಂತಿದೆ. ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ. ಸೂಕ್ತ ಅಭ್ಯರ್ಥಿಯ ಹುಡುಕುವಿಕೆಯ ಸವಾಲು ಒಂದೆಡೆ ಇದ್ದರೆ, ಮತ್ತೊಂದು ಕಡೆ ರಾಜ್ಯ ಸರಕಾರದ ಹಣ, ಹೆಂಡ, ಅಧಿಕಾರದ ದುರ್ಬಳಕೆಯನ್ನು ಮೆಟ್ಟಿ ನಿಲ್ಲಬೇಕಿದೆ. ಸೂಕ್ತ ಅಭ್ಯರ್ಥಿಯನ್ನು ಚರ್ಚಿಸಿ ಘೋಷಿಸಲಾಗುವುದು ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ನಿಫಾ ವೈರಸ್ ಶಂಕೆ: ಉನ್ನತ ಮಟ್ಟದ ಸಭೆ ಕರೆದ ಕೇರಳ ಆರೋಗ್ಯ ಸಚಿವೆ ವೀಣಾ