ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ದೇಗುಲ ಪ್ರವೇಶಿಸುವ ಪ್ರಯತ್ನವಾಗಿ 11 ಮಹಿಳೆಯರು ಪಂಪಾ ನೆಲೆಗೆ ಬಂದು ತಂಗಿದ್ದಾರೆ. ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಮಹಿಳೆಯರು ಅಯ್ಯಪ್ಪ ದರ್ಶನ ಪಡೆಯಲು ಮುಂದಾಗಿರುವ ಈ ಪ್ರಯತ್ನದ ವಿರುದ್ಧ ಭಕ್ತಾದಿಗಳ ಪ್ರತಿಭಟನೆಯೂ ಮುಂದುವರೆದಿದೆ.
ದೇಗುಲಕ್ಕೆ 5 ಕಿ.ಮೀ. ದೂರದಿಂದ ಅರಣ್ಯದಿಂದ ಕೂಡಿದ ಸಾಂಪ್ರದಾಯಿಕ ಮಾರ್ಗವಾಗಿ ಇವರು ಅಯ್ಯಪ್ಪ ಮಂದಿರದತ್ತ ಚಾರಣ ಆರಂಭಿಸಿದರೂ ಸಹ ಮಾರ್ಗಮಧ್ಯೆ ಅಯ್ಯಪ್ಪ ‘ನಾಮ ಜಪ’ ಮಾಡುತ್ತಿರುವ ಪ್ರತಿಭಟನಾಕಾರರನ್ನು ಎದುರಿಸಬೇಕಾಗಿರುವುದರಿಂದ ಅವರು ಮುಂದುವರೆಯುವುದು ಅಸಾಧ್ಯವಾಗಲಿದೆ. ಚೆನ್ನೈ ಮೂಲದ ‘ಮಾನಿತಿ’ ಸಂಘಟನೆಗೆ ಸೇರಿದ ಈ ಮಹಿಳೆಯರು ರಸ್ತೆಯಲ್ಲೇ ನಿಲ್ಲಬೇಕಾಗಿ ಬಂದಿದೆ. ಪೊಲೀಸರು ಭದ್ರತೆಗಾಗಿ ಅವರನ್ನು ಸುತ್ತುವರೆದಿದ್ದಾರೆ.
11 ಮಹಿಳೆಯರ ಪೈಕಿ ಆರು ಮಹಿಳೆಯರು ಮಧುರೈನಿಂದ ರಸ್ತೆ ಮಾರ್ಗವಾಗಿ ಪೊಲೀಸ್ ಭದ್ರತೆಯೊಂದಿಗೆ ತಮ್ಮ ಪ್ರಯಾಣ ಆರಂಭಿಸಿದ್ದರು. ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 5 ಕಿ.ಮೀ. ದೂರದ ಪಂಪಾಗೆ ಬೆಳಗಿನ ಝಾವ 3.30ಕ್ಕೆ ಅವರು ಬಂದು ಸೇರಿದ್ದರು. ಇನ್ನಿತರ ಐವರು ಮಹಿಳೆಯರು ಅವರೊಂದಿಗೆ ಸೇರಿಕೊಂಡಿದ್ದಾರೆ.
‘ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸುವವರೆಗೂ ನಾವು ನಮ್ಮ ಹೋರಾಟ ಮುಂದುವರೆಸುತ್ತೇವೆ. ಭದ್ರತಾ ಕಾರಣಗಳಿಗಾಗಿ ಹಿಂದಿರುಗಬೇಕೆಂದು ಪೊಲೀಸರು ನಮಗೆ ಕೇಳಿಕೊಂಡಿದ್ದಾರೆ. ಆದರೆ ನಾವು ಹಿಂದಿರುಗುವುದಿಲ್ಲ’ ಎಂದು ಮಹಿಳೆಯರು ಹೇಳಿಕೊಂಡಿದ್ದಾರೆ.