ಒಂದೆಡೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಿಸಿ ಜನರಿಗೆ ತಟ್ಟಿದ್ದರೆ, ಮತ್ತೊಂದೆಡೆ ಆಟೋ ಪ್ರಯಾಣ ದರ ಏರಿಕೆಯ ಕಾವು ಸಹ ತಟ್ಟಲು ದಿನಗಣನೆ ಆರಂಭಗೊಂಡಿದೆ.
ರಾಜಧಾನಿ ಬೆಂಗಳೂರಿಗರಿಗೆ ಶೀಘ್ರ ಆಟೋ ಪ್ರಯಾಣ ದರ ಏರಿಕೆಯ ಬಿಸಿ ತಟ್ಟಲಿದೆ. ಆಟೋ ಪ್ರಯಾಣ ದರ ಏರಿಕೆ ಮಾಡುವ ಕುರಿತು ಪ್ರಸ್ತಾಪ ಕೇಳಿಬಂದಿದೆ.
ಕೆಜಿ ರಸ್ತೆಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ರಸ್ತೆ ಸುರಕ್ಷತಾ ಸಮಿತಿಗಳ ಸಭೆಯಲ್ಲಿ ಆಟೋ ಪ್ರಯಾಣದ ದರ ಏರಿಕೆ ಕುರಿತಾಗಿ ಡಿಸಿ ವಿಜಯಶಂಕರ್ ಜತೆ ಆಟೋ ಚಾಲಕರ ಸಂಘದವರು ಸಭೆ ನಡೆಸಿದರು.
ದಿನಬಳಕೆ ವಸ್ತುಗಳು, ಎಲ್ ಪಿ ಜಿ ದರ, ಆಟೋ ರಿಕ್ಷಾ ಬೆಲೆ, ವಿಮೆ, ಬಿಡಿಭಾಗಗಳ ದರ ಹೆಚ್ಚಳಾದ ಕಾರಣ ಆಟೋ ಮೀಟರ್ ದರವನ್ನು ಹೆಚ್ಚಳ ಮಾಡಬೇಕೆಂದು ತಮ್ಮ ಬೇಡಿಕೆಗಳನ್ನು ಆಟೋ ಚಾಲಕರ ಸಂಘಟನೆಗಳ ಮುಖಂಡರು ಮುಂದಿಟ್ಟಿದ್ದಾರೆ.