ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ವಿಧಾನ ಪರಿಷತ್‌ಗೆ ಆಟೋರಿಕ್ಷಾ ಅಥವಾ ಕ್ಯಾಬ್ ಡ್ರೈವರ್ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡುವುದಾಗಿ ಜೆಡಿಎಸ್ ಪಕ್ಷದ ರಾಜ್ಯಾದ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಚಿತ್ರರಂಗದ ಪ್ರತಿನಿಧಿಯನ್ನು ಈ ಹುದ್ದೆಗೆ ನಾಮಕರಣ ಮಾಡುವ ಬದಲು ತಮ್ಮ ಸರ್ಕಾರ ಅಂತಹ ಅವಕಾಶವನ್ನು ವಾಹನ ಚಾಲಕರಿಗೆ ನೀಡಲಿದೆ ಎಂದು ತಿಳಿಸಿದ್ದಾರೆ.
"ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದರೆ, ಆಟೋರಿಕ್ಷಾ, ಕ್ಯಾಬ್ ಮತ್ತು ಲಾರಿ ಡ್ರೈವರ್‌ಗಳಿಗಾಗಿ ಓಲಾ ಮತ್ತು ಊಬರ್‌ನಂತಹ ಕ್ಯಾಬ್ ಸೇವಾ ಕಂಪನಿಯನ್ನು ಸ್ಥಾಪಿಸುವ ಯೋಜನೆಗಳನ್ನು ಹೊಂದಿದೆ" ಎಂದು ಬೆಂಗಳೂರಿನಲ್ಲಿ ಆಟೋರಿಕ್ಷಾ, ಕ್ಯಾಬ್ ಮತ್ತು ಲಾರಿ ಡ್ರೈವರ್‌ಗಳೊಂದಿಗೆ ನಡೆಸಿದ ಚರ್ಚೆಯ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. ಇದರೊಂದಿಗೆ ಈ ಯೋಜನೆಯನ್ನು ಕೇವಲ ಸರ್ಕಾರ ರಚನೆಗೊಂಡ ಒಂದು ತಿಂಗಳಿನಲ್ಲಿ ನಾನು ಜಾರಿಗೊಳಿಸುತ್ತೇನೆ ಎನ್ನುವ ಭರವಸೆಯ ಮಾತನ್ನು ಹೇಳಿದ್ದಾರೆ.
ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಡ್ರೈವರ್‌ಗಳಿಗಾಗಿ ವಸತಿ, ಆರೋಗ್ಯ ಮತ್ತು ಉತ್ತಮ ವಿದ್ಯಾಭ್ಯಾಸವನ್ನು ಒದಗಿಸುವುದಾಗಿಯೂ ಮತ್ತು ಡ್ರೈವರ್‌ಗಳ ಮೇಲೆ ಪೋಲೀಸರಿಂದಾಗುತ್ತಿರುವ ಕಿರುಕುಳವನ್ನು ನಿಲ್ಲಿಸುವುದಾಗಿಯೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.