ನವದೆಹಲಿ: ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ಸಿಎಂ ಅಧಿಕೃತ ನಿವಾಸ ಖಾಲಿ ಮಾಡಿದ್ದು ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಇದಕ್ಕೆ ಮೊದಲು ಅವರು ಮನೆಯ ನೌಕರರನ್ನು ಬಿಗಿದಪ್ಪಿ ಬೀಳ್ಕೊಡುಗೆ ಪಡೆದಿದ್ದಾರೆ.
ತಮ್ಮ ವಯಸ್ಸಾದ ತಂದೆ-ತಾಯಿ ಹಾಗೂ ಪತ್ನಿ ಜೊತೆಗೆ ಕೇಜ್ರಿವಾಲ್ ಸಿಎಂ ಅಧಿಕೃತ ನಿವಾಸದಿಂದ ಹೊರಗೆ ಬರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೆಹಲಿ ಅಬಕಾರಿ ಅಕ್ರಮ ಹಗರಣ ಸಂಬಂಧ ಜಾಮೀನು ಪಡೆದು ಹೊರಬಂದ ಬೆನ್ನಲ್ಲೇ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಆದರೆ ಇದುವರೆಗೆ ಸಿಎಂ ಅಧಿಕೃತ ನಿವಾಸದಲ್ಲಿಯೇ ಇದ್ದರು. ಇಂದು ಅಧಿಕೃತ ನಿವಾಸದಿಂದ ಆಪ್ ಮುಖ್ಯ ಕಚೇರಿಯ ಸಮೀಪವಿರುವ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಈ ವೇಳೆ ಇಷ್ಟು ದಿನ ಅವರ ಜೊತೆ ಕೆಲಸ ಮಾಡುತ್ತಿದ್ದ ಎಲ್ಲಾ ನೌಕರರೂ ಸಾಲಾಗಿ ನಿಂತು ಕೇಜ್ರಿವಾಲ್ ರನ್ನು ಬೀಳ್ಕೊಟ್ಟರು. ಪ್ರತಿಯೊಬ್ಬರನ್ನೂ ಬಿಗಿದಪ್ಪಿ ಕೇಜ್ರಿವಾಲ್ ಇಷ್ಟು ದಿನ ತಮಗೆ ಸೇವೆ ಸಲ್ಲಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದರು.
ಕೇಜ್ರಿವಾಲ್ ಬಳಿಕ ದೆಹಲಿ ಸಿಎಂ ಆಗಿ ಅವರ ಅತ್ಯಾಪ್ತರಾಗಿದ್ದ ಸಚಿವೆ ಅತಿಶಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಕೇಜ್ರಿವಾಲ್ ಮೇಲಿನ ಗೌರವದಿಂದಾಗಿ ಅವರು ಕೂರುತ್ತಿದ್ದ ಸಿಎಂ ಕುರ್ಚಿಯಲ್ಲಿ ಕೂರದೇ ಅವರ ನಿವಾಸವನ್ನೂ ಬಳಸುತ್ತಿಲ್ಲ ಎನ್ನಲಾಗಿದೆ. ನಾನು ಭರತನ ರೀತಿ ದೆಹಲಿ ಆಡಳಿತ ನಡೆಸುತ್ತೇನೆ ಎಂದು ಅತಿಶಿ ಹೇಳಿದ್ದರು.