ರಾಜ್ಯಾದ್ಯಂತ ವರುಣನ ಆರ್ಭಟ ಜೊರಾಗಿದೆ. ಆದರೆ ನಿಗದಿತ ಸಮಯದಲ್ಲಿ ಬಾರದೇ ರೈತನ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಹೆಸರು, ಅಲಸಂದೆ, ಉದ್ದು, ಎಳ್ಳು, ತೊಗರಿ ಈಗ ದನಕರುಗಳ ಪಾಲಾಗಿವೆ.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿ ಆರಿದ್ರಾ ಮಳೆ ಕೈ ಕೊಟ್ಟ ಪರಿಣಾಮ ಕಾಯಿಕಚ್ಚುವ ಹಂತದಲ್ಲಿದ್ದ ಮುಂಗಾರು ಬೆಳೆಗಳು ನಷ್ಟವಾಗಿದೆ. ಅಶ್ವಿನಿ ಭರಣಿ ಮಳೆ ಚೆನ್ನಾಗಿ ಸುರಿದಿದ್ರಿಂದ ಸಂತೋಷಗೊಂಡ ರೈತರು, ಹೆಸರು, ಅಲಸಂದೆ, ಉದ್ದು, ಎಳ್ಳು ಬಿತ್ತನೆ ಮಾಡಿದ್ದರು. ಕಾಲಕಾಲಕ್ಕೆ ಮಳೆಯಾಗಿದ್ರಿಂದ ಹಚ್ಚಹಸಿರಾಗಿ ಬೆಳೆ ಬಂದಿತ್ತು. ಕಾಳುಗಟ್ಟುವ ಸಮಯದಲ್ಲಿ ಆರಿದ್ರಾ ಮಳೆ ಕೈಕೊಟ್ಟಿದ್ರಿಂದ ಬೆಳೆ ಸಂಪೂರ್ಣ ಹಾಳಾಗಿದೆ.
ರೈತರು ದನ ಕರುಗಳನ್ನ ಕಟ್ಟಿ ಮೇಯಿಸುತ್ತಿದ್ದಾರೆ. ಕಳೆದ ವರ್ಷವೂ ಸಹ ಆರಿದ್ರಾ ಮಳೆ ಕೈಕೊಟ್ಟು ಸಾವಿರಾರು ಎಕರೆ ಮುಂಗಾರು ಬೆಳೆ ನಷ್ಟವಾಗಿತ್ತು. ಈ ವರ್ಷವೂ ಸಹ ಬೆಳೆ ಹಾಳಾಗಿದ್ರಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಜಮೀನು ಹದ ಮಾಡಿ ಗೊಬ್ಬರ ಹಾಕಿ ಬೀಜ ಬಿತ್ತನೆ ಮಾಡಿದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಳೆದ ವರ್ಷದ ಬೆಳೆ ನಷ್ಟದಿಂದಾದ ಫಸಲ್ ಬೀಮಾ ಯೋಜನೆಯಡಿ ಪರಿಹಾರ ಇನ್ನೂ ಸಿಕ್ಕಿಲ್ಲ. ಈ ವರ್ಷವೂ ಬೆಳೆ ನಷ್ಟವಾಗಿದ್ದು ಈ ಭಾಗದ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ.