ಬಳ್ಳಾರಿ: ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಟ್ಟಾದ ಮಾಜಿ ಡಿವೈಎಸ್ಪಿ ಅನುಪಮಾ ಶೇಣೈ ಕೈ ಮುಗಿದು ಅರ್ಧಕ್ಕೆ ಸುದ್ದಿಗೋಷ್ಠಿ ಮೊಟಕುಗೊಳಿಸಿದ ಘಟನೆ ನಡೆದಿದೆ.
ಹೊಸ ರಾಜಕೀಯ ಪಕ್ಷ ಕಟ್ಟಿ ರಾಜಕೀಯ ನೆಲೆ ಕಂಡುಕೊಳ್ಳಲು ಹನಣಿಸುತ್ತಿರುವ ಅನುಪಮಾ, ಮುಂದಿನ ತಿಂಗಳಲ್ಲಿ ಉದ್ಘಾಟನೆಯಾಗಲಿರುವ ತಮ್ಮ ಹೊಸ ಪಕ್ಷದ ಬಗ್ಗೆ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಕೂಡ್ಲಿಗಿಯಲ್ಲೇ ಹೊಸ ಪಕ್ಷ ಉದ್ಘಾಟನೆ ಯಾಕೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಅನುಪಮಾ, ಮಾಧ್ಯಮದವರು ಬಳ್ಳಾರಿಯನ್ನು ‘ರಿಪಬ್ಲಿಕ್ ಆಫ್ ಬಳ್ಳಾರಿ’ ಎಂದು ಕೆಟ್ಟದಾಗಿ ಬಿಂಬಿಸಿದ್ದೀರಿ. ಆದ್ರೆ ವಾಸ್ತವವಾಗಿ ಬಳ್ಳಾರಿ ಹಾಗಿಲ್ಲ. ಇಲ್ಲಿನ ಜನರು ಮುಗ್ದರು ಎಂದು ವಿವರಿಸಿದ್ದಾರೆ.
ಇದಕ್ಕೆ ಉತ್ತರ ನೀಡಿದ ಪತ್ರಕರ್ತರು, ನಾವೂ ‘ರಿಪಬ್ಲಿಕ್ ಆಫ್ ಬಳ್ಳಾರಿ’ ಎಂದಿಲ್ಲ. ನ್ಯಾ. ಸಂತೋಷ ಹೆಗಡೆ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಹೇಳಿದ್ದರು. ಈ ಹಿಂದೆ ನೀವೂ ಕೂಡಾ ಕೂಡ್ಲಿಗಿಯಲ್ಲಿ ‘ಲಿಕ್ಕರ್ ಲಾಬಿ’ ಎಂದು ಆರೋಪಿಸಿದ್ದು ಮರೆತು ಬಿಟ್ಟಿದ್ದೀರಾ ಎಂದು ಮರು ಪ್ರಶ್ನೆ ಕೇಳಿದ್ದಾರೆ.
ಇದರಿಂದ ಸಿಟ್ಟಾದ ಅನುಪಮಾ ಶೆಣೈ, ಅರ್ಧಕ್ಕೆ ಸುದ್ದಿಗೋಷ್ಠಿ ಮೊಟಕುಗೊಳಿಸಿ ಪತ್ರಕರ್ತರಿಗೆ ಕೈ ಮುಗಿದು ಸಿಟ್ಟಿನಿಂದಲೇ ಹೊರನಡೆದಿದ್ದಾರೆ.