ರಾಯಚೂರು: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಹೊರ ರಾಜ್ಯಗಳಿಗೆ ಸಾಗಿಸುತ್ತಿದ್ದ ಮೂರು ಲಾರಿಗಳನ್ನು ಮಾನ್ವಿ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ಮಧ್ಯಾಹ್ನ ತಾಲೂಕಿನ ಹೊರವಲಯದಲ್ಲಿ ನಡೆದಿದೆ.
ಮೂರು ಲಾರಿಗಳಲ್ಲಿ ಭರ್ತಿಯಾಗಿ ಅಕ್ಕಿ ತುಂಬಿಸಿಕೊಂಡು ರಾಯಚೂರಿನಿಂದ ಹೊರಟಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಾನ್ವಿ ಪೊಲೀಸರು ಲಕ್ಷಾಂತರ ರು. ಮೌಲ್ಯದ ಅನ್ನ ಭಾಗ್ಯದ ಅಕ್ಕ ಚೀಲವನ್ನು ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ. ಸಂದರ್ಭದಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಆ ಮೂರು ಲಾರಿಗಳು ಉದ್ಯಮಿಯೊಬ್ಬರಿಗೆ ಸೇರಿದ್ದು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಆ ಮಾಹಿತಿ ಹಿಡಿದು ಹೊರಟಾಗ ಅದೇ ಉದ್ಯಮಿ ಅನ್ನಭಾಗ್ಯ ಯೋಜನೆಯ ಸಾಮಾಗ್ರಿಗಳನ್ನು ಶಾಲೆಗೆ ಸಾಗಿಸುವ ಗುತ್ತಿಗೆ ಪಡೆದಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ.
ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸುದ್ದಿ ತಿಳಿಯುತ್ತಿದ್ದಂತೆ ಆಹಾರ ಇಲಾಖೆ ಅಧಿಕಾರಿಗಳು ಮಾನ್ವಿ ಪೊಲೀಸ್ ಠಾಣೆಗೆ ದೌಡಾಯಿಸಿ, ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ, ಆಹಾರ ಇಲಾಖೆಯ ಅಧಿಕಾರಿಗಳ ಬೆಂಬಲವಿಲ್ಲದೆ ಮೂರು ಲಾರಿಗಳಷ್ಟು ಅನ್ನಭಾಗ್ಯ ಯೋಜನೆಯ ಅಕ್ಕಿಗಳನ್ನು ಸಾಗಾಟ ಮಾಡಲು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದರ ಸಂಪೂರ್ಣ ತನಿಖೆ ಆಹಾರ ಇಲಾಖೆಯದ್ದೇ ಆಗಿರುವುದರಿಂದ, ಸತ್ಯಾ ಸತ್ಯತೆಗಳು ಹೊರ ಬರುವುದು ದೂರದ ಮಾತು ಎನ್ನುವ ಅಪಸ್ವರ ಮಾನ್ವಿ ಜನತೆಯಿಂದ ಕೇಳಿ ಬರುತ್ತಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.