ರಾಷ್ಟ್ರರಾಜಧಾನಿಯಲ್ಲಿ ಚಳಿಗಾಲದ ಕೆಲ ತಿಂಗಳು ಉಸಿರುಗಟ್ಟಿಸುವ ಧೂಳು-ಹೊಗೆಯಲ್ಲಿ ಬದುಕಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಬೆಳೆಕೊಯ್ಲಿನ ನಂತರ ಉಳಿದ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಕ್ರಮ.
ಇದೀಗ ಈ ನಿಟ್ಟಿನಲ್ಲಿ ಕೇಂದ್ರ ವಿದ್ಯುತ್ ಸಚಿವಾಲಯ ಪರಿಹಾರದ ಮಾರ್ಗವೊಂದನ್ನು ತೆರೆದಿರಿಸಿದೆ. ಕಲ್ಲಿದ್ದಲು ಉಪಯೋಗಿಸಿಕೊಂಡು ನಡೆಯುವ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಒಂದು ವರ್ಷದ ಅವಧಿಗೆ ಕಲ್ಲಿದ್ದಿಲಿನ ಜತೆ ಶೇ. 5ರಷ್ಟು ಕೃಷಿ ಕಳೆಯನ್ನೂ ಶಾಖೋತ್ಪನ್ನಕ್ಕೆ ಬಳಸಬೇಕು ಎಂದು ನಿರ್ದೇಶಿಸಿದೆ.
ಈ ಹಿನ್ನೆಲೆ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ 8,65,000 ಟನ್ ನಷ್ಟು ಬಯೊಮಾಸ್ ಅನ್ನು ಖರೀದಿ ಮಾಡಲಿದ್ದು, ಈಗಾಗಲೇ ಇದು ಪೂರೈಕೆ ಹಂತದಲ್ಲಿದೆ.
ಅಕ್ಟೋಬರ್ 2021 ರಲ್ಲಿ ವಿದ್ಯುತ್ ನಿಗಮ 65,000 ಟನ್ಗಳ ಹೆಚ್ಚುವರಿ ಖರೀದಿಗೆ ಮುಂದಾಗಿದೆ. 25,00,000 ಟನ್ಗಳ ಸಂಗ್ರಹಣೆಯ ಮತ್ತೊಂದು ಭಾಗವು ಪ್ರಗತಿಯಲ್ಲಿದೆ.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಲ್ಲಿ ಸುಮಾರು 13,01,000 ಟನ್ ಗಳಷ್ಟು ಬಯೋಮಾಸ್ ಸಂಗ್ರವಾಗಿದ್ದು, ನವೆಂಬರ್ ನಲ್ಲಿಯೇ ಇದರ ಖರೀದಿಯೂ ಅಂತಿಮಗೊಳ್ಳಲಿದೆ. ಕೃಷಿಕಳೆಯ ಸಂಗ್ರಹ ಮತ್ತು ಸಂಸ್ಕರಣೆಯಲ್ಲಿರುವ ಯುವ ಉದ್ಯಮಿಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯುತ್ ಇಲಾಖೆ ಯೋಜನೆ ರೂಪಿಸುತ್ತಿದೆ.
ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಕೃಷಿಭೂಮಿಯಲ್ಲಿ ತ್ಯಾಜ್ಯಗಳನ್ನು ಸುಡುವ ಪ್ರಮಾಣವು 2021ರ ಇದೇ ಅವಧಿಗೆ ಹೋಲಿಸಿದರೆ 2021ರಲ್ಲಿ ಶೇ.58.3ರಷ್ಟು ಕಡಿಮೆಯಾಗಿದೆ.