ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ಮತ್ತು ಸೀಟು ಹಂಚಿಕೆ ಕುರಿತಂತೆ ಯೋಜನೆ ರೂಪಿಸಲು ಗೃಹಸಚಿವ ಅಮಿತ್ ಶಾ ಬೆಂಗಳೂರಿಗೆ ಬರಲಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಎರಡೂ ಪಕ್ಷಗಳೂ ಈಗ ಸೀಟು ಹಂಚಿಕೆಯಲ್ಲಿ ಬ್ಯುಸಿಯಾಗಿದೆ. ಜೆಡಿಎಸ್ ಮಂಡ್ಯ, ಬೆಂಗಳೂರು ಗ್ರಾಮಾಂತರ ಸೇರಿದಂತೆ ತನ್ನ ಭದ್ರಕೋಟೆಯ ಕ್ಷೇತ್ರಗಳಿಗೆ ಬೇಡಿಕೆಯಿಟ್ಟಿದೆ. ಇದರ ನಡುವೆ ಸ್ಥಳೀಯ ನಾಯಕರಿಂದ ವಿರೋಧಗಳೂ ವ್ಯಕ್ತವಾಗಿದೆ. ಈ ಎಲ್ಲಾ ಅಸಮಾಧಾನಗಳನ್ನು ಸರಿಪಡಿಸಲು ಸ್ವತಃ ಅಮಿತ್ ಶಾ ಎಂಟ್ರಿ ಕೊಡುತ್ತಿದ್ದಾರೆ.
ಫೆ.9 ಕ್ಕೆ ಚಾಣಕ್ಯ ಅಮಿತ್ ಶಾ ಎಂಟ್ರಿ
ಬಿಜೆಪಿಯ ಚುನಾವಣಾ ತಂತ್ರಗಳ ಚಾಣಕ್ಯ ಎಂದೇ ಬಿಂಬಿತವಾಗಿರುವ ಗೃಹ ಸಚಿವ ಅಮಿತ್ ಶಾ ಫೆಬ್ರವರಿ 9 ಕ್ಕೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಅವರು ಸ್ಥಳೀಯ ನಾಯಕರೊಂದಿಗೆ ಸಭೆ ಮೇಲೆ ಸಭೆ ನಡೆಸಲಿದ್ದಾರೆ. ಜೊತೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಪರಿಶೀಲನೆ ನಡೆಸಲಿದ್ದಾರೆ. ಕ್ಷೇತ್ರಾವಾರು ಸಮೀಕ್ಷೆ, ವರದಿಗಳನ್ನು ಆಧರಿಸಿ ಅಭ್ಯರ್ಥಿಗಳ ಆಯ್ಕೆ ಫೈನಲ್ ಮಾಡಲಿದ್ದಾರೆ.
ಹಾಲಿ ಸಂಸದರ ಪೈಕಿ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಈ ಸಂದರ್ಭದಲ್ಲಿ ಖಚಿತವಾಗಲಿದೆ. ಕೆಲವು ಸಂಸದರಿಗೆ ಈ ಬಾರಿ ಟಿಕೆಟ್ ನೀಡದೇ ಹೊಸಬರಿಗೆ ಮಣೆ ಹಾಕುವ ಸಾಧ‍್ಯತೆಯಿದೆ. ಅಮಿತ್ ಶಾ ಭೇಟಿ ವೇಳೆ 10-15 ಅಭ್ಯರ್ಥಿಗಳ ಹೆಸರು ಫೈನಲ್ ಆಗುವ ಸಾಧ‍್ಯತೆಗಳಿವೆ.
ಅಷ್ಟೇ ಅಲ್ಲದೆ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲಿದ್ದಾರೆ. ಜೆಡಿಎಸ್ ಜೊತೆ ಸೀಟು ಹಂಚಿಕೆ ವಿಚಾರದಲ್ಲಿ ಕೆಲವು ನಾಯಕರಿಗೆ ಅಸಮಾಧಾನಗಳಿವೆ. ಅವೆಲ್ಲವನ್ನೂ ಶಮನಗೊಳಿಸಿ ಒಗ್ಗಟ್ಟಾಗಿ ಚುನಾವಣೆ ಎದುರಿಸುವಂತೆ ಮಾಡುವ ಗುರಿ ಅಮಿತ್ ಶಾಗಿದೆ.