ಆದಿವಾಸಿಗಳು ಹಾಗೂ ಬುಡಕಟ್ಟು ಜನರು ಶತ ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರ ಶಿಕ್ಷಣ, ಆರೋಗ್ಯ, ವಸತಿ ಹಾಗೂ ಉದ್ಯೋಗಕ್ಕಾಗಿ ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಉಪಯೋಜನೆ ಸೌಲಭ್ಯ: ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಆಯೋಜಿಸಿದ್ದ ಆದಿವಾಸಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೇನುಕುರುಬ, ಕೊರಗ, ಸೋಲಿಗ, ಮಲೆಕುಡಿಯ, ಯರವ, ಹಕ್ಕಿಪಿಕ್ಕಿ, ಸಿದ್ಧಿ, ಬೆಟ್ಟಕುರುಬ ಮುಂತಾದ ಸಮುದಾಯಗಳು, ಕಾಡಿನಲ್ಲಿ ಅಥವಾ ಕಾಡಿನ ಅಂಚಿನಲ್ಲಿ ವಾಸ ಮಾಡುತ್ತಿದ್ದು, ಗಿರಿಜನ ಉಪಯೋಜನೆ ಅಡಿಯಲ್ಲಿ ಅವರಿಗೆ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.
ಅರಣ್ಯ ಉತ್ಪನ್ನಗಳ ಮೇಲೆ ಈ ಸಮುದಾಯದವರ ಜೀವನ ಅವಲಂಭಿಸಿದೆ. ಅವರಿಗೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಟಾನಗೊಳಿಸಲು ಸಮಾಜ ಕಲ್ಯಾಣ ಸಚಿವರಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಅನ್ನಭಾಗ್ಯ ಯೋಜನೆಯಡಿ ಈ ಸಮುದಾಯಗಳ 41 ಸಾವಿರ ಜನರಿಗೆ ತಲಾ 5 ಕೆ.ಜಿ. ಅಕ್ಕಿ ನೀಡುತ್ತಿದ್ದೇವೆ. ಮುಂದಿನ ಏಪ್ರಿಲ್‍ನಿಂದ ಈ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.
ಪೌಷ್ಠಿಕ ಆಹಾರ: ಅನ್ನಭಾಗ್ಯ ಯೋಜನೆಯಲ್ಲದೆ, ಆದಿವಾಸಿಗಳಿಗೆ ಪ್ರತಿ ಕುಟುಂಬಕ್ಕೆ 15 ಕೆ.ಜಿ. ಅಕ್ಕಿ, 5 ಕೆ.ಜಿ. ಬೇಳೆ, 2 ಲೀಟರ್ ಎಣ್ಣೆ, 1 ಕೆ.ಜಿ. ನಂದಿನಿ ತುಪ್ಪ, 45 ಕೋಳಿ ಮೊಟ್ಟೆ, 4 ಕೆ.ಜಿ. ಸಕ್ಕರೆ ಅಥವಾ ಬೆಲ್ಲ, 5 ಕೆ.ಜಿ. ತೊಗರಿ ಅಥವಾ ಹೆಸರು ಕಾಳು ನೀಡುತ್ತಿದ್ದೇವೆ. ಆದಿವಾಸಿಗಳಿಗೆ ಪೌಷ್ಟಿಕ ಆಹಾರ ಸಿಗಬೇಕು ಎಂಬುದು ಇದರ ಉದ್ದೇಶ ಎಂದರು.
ಚಿಕ್ಕಮಗಳೂರು ಜಿಲ್ಲೆಯ ಆದಿವಾಸಿಗಳಿಗೆ ಈ ಸೌಲಭ್ಯ ಸಿಗುತ್ತಿರಲಿಲ್ಲ. ಸಮಾಜ ಕಲ್ಯಾಣ ಸಚಿವರು ಆ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಈ ವಿಷಯ ಗಮನಕ್ಕೆ ಬಂದಿತ್ತು. ಈಗ ಚಿಕ್ಕಮಗಳೂರು ಜಿಲ್ಲೆಯ ಆದಿವಾಸಿಗಳಿಗೂ ಈ ಸೌಲಭ್ಯ ನೀಡುತ್ತಿದ್ದೇವೆ ಎಂದು ಹೇಳಿದರು.
ಹಕ್ಕುಪತ್ರ:
2006ರ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಹಲವಾರು ಜನರಿಗೆ ಹಕ್ಕು ಪತ್ರವನ್ನು ಸಹ ನೀಡಿದ್ದೇವೆ. ಈ ಸಮುದಾಯದ ಜನರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಕಡ್ಡಾಯವಾಗಿ ಅವರಿಗೆ ಸಿಗಲೇಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಕೊರಗ ಹಾಗೂ ಜೇನು ಕುರುಬ ಸಮುದಾಯದ ನಿರುದ್ಯೋಗಿ ಯುವಕರಿಗೆ ಸರ್ಕಾರ ನಿರುದ್ಯೋಗಿ ಭತ್ಯವನ್ನು ಸಹ ನೀಡುತ್ತಿದ್ದೇವೆ. ಆದಿವಾಸಿಗಳ ಸಮಸ್ಯೆ ತಿಳಿಯಲು ಸಮಾಜ ಕಲ್ಯಾಣ ಸಚಿವರು ಪ್ರತಿ ವರ್ಷ ಡಿಸೆಂಬರ್ 31 ರಂದು ಹಾಡಿಗಳಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಹೇಳಿದರು. ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರಾದ ಹೆಚ್. ಆಂಜನೇಯ, ಅರಣ್ಯ ಸಚಿವರಾದ ಬಿ. ರಮಾನಾಥ ರೈ, ಶಿಕ್ಷಣ ಸಚಿವರಾದ ತನ್ವೀರ್ ಸೇಠ್ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.