ನಿಮ್ಮ ನಿಮ್ಮ ಜಿಲ್ಲೆಯ ಹಿತವನ್ನು ರಕ್ಷಿಸಲು, ಜನರ ಸಮಸ್ಯೆ ಆಲಿಸಲು ನೀವೆಷ್ಟು ಸಫಲರಾಗಿದ್ದೀರಿ? ಎಂದು ಪ್ರಶ್ನಿಸಿಕೊಳ್ಳಬೇಕಾದ ಸಂದರ್ಭ ಎಂಬುದೂ ನಿಮಗೆ ಗೊತ್ತಿರಲಿ. ಹೀಗಂತ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯುಕ್ತ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾಮಗಾರಿಗೆ ಸಜ್ಜಾಗುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಮುಖ್ಯ ಕಾರ್ಯದರ್ಶಿಗಳು, ಬರ ಪರಿಹಾರ ಕಾಮಗಾರಿಗಾಗಿ ಈಗಾಗಲೇ ರೂಪಿಸಲಾಗಿರುವ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ. ಇದನ್ನು ಒಂದು ಕಾರ್ಯಕ್ರಮ ಎಂಬಂತೆ ನೋಡಿ ಸುಮ್ಮನಾಗಬೇಡಿ. ಬದಲಿಗೆ ಜನರ ಸಮಸ್ಯೆ ಆಲಿಸಲು ಮುಖ್ಯಮಂತ್ರಿಗಳೇ ಬರಬೇಕು ಎಂಬ ಭಾವನೆ ಜನರಲ್ಲಿ ಬರುತ್ತದೆ ಎಂಬುದೂ ನಿಮ್ಮ ಗಮನದಲ್ಲಿರಲಿ.
ಗ್ರಾಮವಾಸ್ತವ್ಯ ನಡೆಸುವ ಮೂಲಕ ಖುದ್ದು ಮುಖ್ಯಮಂತ್ರಿಗಳೇ ಜನರ ಬಳಿ ಹೊರಟಿದ್ದಾರೆ. ಯಾವ ಕಾರಣಕ್ಕೂ ಜನಜೀವನ ಅಸ್ತವ್ಯಸ್ತವಾಗದಂತೆ ನೋಡಿಕೊಳ್ಳಿ. ಜನ, ಜಾನುವಾರಗಳ ಹಿತ ರಕ್ಷಿಸಿ ಎಂದಿದ್ದಾರೆ.
ಬರಗಾಲದ ಜತೆ ಕೆಲ ಜಿಲ್ಲೆಗಳಲ್ಲಿ ಎದುರಾಗಬಹುದಾದ ಅತಿವೃಷ್ಟಿಯ ಆತಂಕವನ್ನು ಎದುರಿಸಲೂ ಸಜ್ಜಾಗಿ. ಇದು ನಿಮ್ಮ ಜಿಲ್ಲೆಯ ಹಿತವನ್ನು ರಕ್ಷಿಸಲು, ಜನರ ಸಮಸ್ಯೆ ಆಲಿಸಲು ನೀವೆಷ್ಟು ಸಫಲರಾಗಿದ್ದೀರಿ?ಎಂದು ಪ್ರಶ್ನಿಸಿಕೊಳ್ಳಬೇಕಾದ ಸಂದರ್ಭ ಎಂಬುದೂ ನಿಮಗೆ ಗೊತ್ತಿರಲಿ. ಹೀಗಂತ ಜಿಲ್ಲಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಗಳು ಎಚ್ಚರಿಕೆಯ ನುಡಿ ನುಡಿದಿದ್ದಾರೆ.