Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

2012ರ ಎಪಿಪಿ, ಎಜಿಪಿ ನೇಮಕಾತಿ ಅಕ್ರಮ: ಕ್ರಮಕ್ಕೆ ಸಕ್ಷಮ ಪ್ರಾಧಿಕಾರಕ್ಕೆ ಹೈಕೋರ್ಟ್ ಸೂಚನೆ

2012ರ ಎಪಿಪಿ, ಎಜಿಪಿ ನೇಮಕಾತಿ ಅಕ್ರಮ: ಕ್ರಮಕ್ಕೆ ಸಕ್ಷಮ ಪ್ರಾಧಿಕಾರಕ್ಕೆ ಹೈಕೋರ್ಟ್ ಸೂಚನೆ
bangalore , ಶುಕ್ರವಾರ, 10 ಡಿಸೆಂಬರ್ 2021 (20:13 IST)
2012ರಲ್ಲಿ ನಡೆದಿದ್ದ ಸಹಾಯಕ ಸರ್ಕಾರಿ ಅಭಿಯೋಜಕರು (ಎಪಿಪಿ) ಹಾಗೂ ಹೆಚ್ಚುವರಿ ಸರಕಾರಿ ಅಭಿಯೋಜಕರು (ಎಜಿಪಿ) ಹುದ್ದೆಯ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪದ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ವಿಚಾರಣೆ ನಡೆಸಿದೆ.
ಈ ಆರೋಪಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸಿರುವ ಹೈಕೋರ್ಟ್, ಸಕ್ಷಮ ಪ್ರಾಧಿಕಾರ ಪರಿಶೀಲಿಸಿ ಅಂತಿಮ ನಿರ್ಣಯ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
2012ರಲ್ಲಿ ನಡೆದಿದ್ದ ಎಪಿಪಿ ಹಾಗೂ ಎಜಿಪಿ ಹುದ್ದೆಯ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದರೂ ಆರೋಪಿತರ ವಿರುದ್ಧ ಸರ್ಕಾರ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಹೈಕೋರ್ಟ್ ಈ ನಿರ್ದೇಶನ ನೀಡಿದೆ.
2012ರಲ್ಲಿ ನಡೆದಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ ನ್ಯಾಯಮೂರ್ತಿಗಳ ಸಹಿಯನ್ನೇ ನಕಲು ಮಾಡಿದ ಆರೋಪ ಇದೆ. ಇದು ನ್ಯಾಯಾಂಗಕ್ಕೆ ಮಾಡಲಾದ ವಂಚನೆಯಾಗಿದೆ. ಆದರೆ, ಸರ್ಕಾರ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ನೇಮಕವಾಗಿದ್ದ 197 ಮಂದಿಯ ಪೈಕಿ 61 ಎಪಿಪಿಗಳ ವಿರುದ್ಧ ಮಾತ್ರ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪಿಗಳು ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ತಮಗೂ ಇದಕ್ಕೂ ಸಂಬಂಧ ಇಲ್ಲ, ಏನೂ ನಡೆದಿಲ್ಲ ಎಂಬಂತೆ ಕೆಲಸ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ನೇಮಕಾತಿಯಲ್ಲಿ ಆಯ್ಕೆಯಾದವರು ಕೆಲವರು ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಆರೋಪಿಗಳು ತಮ್ಮ ಹುದ್ದೆಯಲ್ಲಿ ಮುಂದುವರಿಯದಂತೆ ನೋಡಿಕೊಳ್ಳಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.
ಈ ಬಗ್ಗೆ ಈಗಾಗಲೇ ತನಿಖೆ ನಡೆದು ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ. ಹಾಗಾಗಿ ಈ ಅರ್ಜಿಯ ಹೆಚ್ಚಿನ ವಿಚಾರಣೆ ಮುಂದುವರಿಸುವ ಅಗತ್ಯ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರ ಅಂತಿಮ ನಿರ್ಣಯ ಕೈಗೊಳ್ಳುವಂತೆ ಹಾಗೂ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಿ ಇತ್ಯರ್ಥಪಡಿಸುವಂತೆ ನಿರ್ದೇಶಿಸಿ ಅರ್ಜಿಯನ್ನು ವಿಲೇ ಮಾಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನ ಪರಿಷತ್ ಚುನಾವಣೆ: ಕೊಡಗಿನಲ್ಲಿ ಬಿರುಸಿನ ಮತದಾನ