ಬೆಂಗಳೂರು: ಸಂತ್ರಸ್ತ ಮಹಿಳೆಯ ಅಪಹರಣ ಸಂಬಂಧ ಪತಿ ಎಚ್ ಡಿ ರೇವಣ್ಣ ಬಂಧನದ ಬೆನ್ನಲ್ಲೇ ಇದೀಗ ಪತ್ನಿ ಭವಾನಿ ರೇವಣ್ಣಗೂ ಬಂಧನ ಭೀತಿ ಎದುರಾಗಿದೆ.
ಮಹಿಳೆ ಕಿಡ್ನ್ಯಾಪ್ ಕೇಸ್‌ನಲ್ಲಿ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದ ಬೆನ್ನಲ್ಲೇ ಎಸ್ ಐಟಿ ಅಧಿಕಾರಿಗಳು ಮಾಜಿ ಪ್ರಧಾನಿ ಎಚ್ ದೇವೇಗೌಡ ಅವರ ಮನೆಯಲ್ಲಿ ವಶಕ್ಕೆ ಪಡೆದರು.
ಇನ್ನೂ ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಸಂತ್ರಸ್ತೆಯ ಮಗ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ, ಭವಾನಿ ರೇವಣ್ಣ ಅವರು ಕರೆಯುತ್ತಿದ್ದಾರೆ ಎಂದು ಹೇಳಿ ನಮ್ಮಮ್ಮನನ್ನು ಸತೀಶ್ ಬಾಬು ಎಂಬಾತ ಕರೆದುಕೊಂಡು ಹೋಗಿದ್ದಾರೆ. ಆ ನಂತರ ನಮ್ಮ ತಾಯಿ ನಾಪತ್ತೆಯಾಗಿದ್ದಾರೆ ಎಂದು ಸಂತ್ರಸ್ತೆಯ ಮಗ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರು ದಾಖಲಾದ ನಂತರ ಎಸ್‌ಐಟಿ ಭವಾನಿ ರೇವಣ್ಣ ಅವರನ್ನು ತುರ್ತು ವಿಚಾರಣೆಗೆ ಹಾಜರಾಗುವಂತೆ ಕೇಳಿಕೊಂಡಿದ್ದಾರೆ. ವಿಚಾರಣೆ ವೇಳೆ ಸಂತ್ರಸ್ತೆಯ ಹೇಳಿಕೆಗಳ ಮೇಲೆ ಭವಾನಿ ರೇವಣ್ಣ ಭವಿಷ್ಯ ನಿಂತಿದೆ.