ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಮಹಿಳೆ ಮತ್ತು ಮಕ್ಕಳ ಹಾಗೂ ನಾಗರಿಕರ ಸುರಕ್ಷತೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ವಷ್ಟಪಡಿಸಿದ್ದಾರೆ. ವಿಕಾಸ ಸೌಧದ ಕೊಠಡಿ ಸಂಖ್ಯೆ 318 ರಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೃಹಸಚಿವರು ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಎರಡು ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ ಎಂದರು.
ಹೊಸ ವರ್ಷದ ದಿನ ತಮ್ಮ ಹೇಳಿಕೆಯನ್ನು ಕೆಲವು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ ಎಂದ ಸಚಿವರು ಈ ಬಗ್ಗೆ ನಾನು ಹೇಳಿಕೆಯಲ್ಲಿ ಸ್ವಷ್ಟನೆ ನೀಡಿರುವುದಾಗಿ ತಿಳಿಸಿದರು. ರಾಜ್ಯಪಾಲರಿಗೆ ವರದಿ: ನಗರದ ಎಂ.ಜಿ. ರಸ್ತೆಯಲ್ಲಿ ನಡೆದ ಘಟನೆ ಕುರಿತಂತೆ ರಾಜ್ಯಪಾಲರು ವರದಿ ಕೇಳಿದ್ದು ಸದ್ಯದಲ್ಲಿಯೇ ಸರ್ಕಾರ ರಾಜ್ಯಪಾಲರಿಗೆ ವರದಿ ನೀಡಲಿದೆ ಎಂದರು.
ಬೆಂಗಳೂರು ನಗರದಲ್ಲಿ ಸುರಕ್ಷತೆಗೆ ಇನ್ನಷ್ಟು ಒತ್ತು ನೀಡುವ ದೃಷ್ಟಿಯಿಂದ ಇನ್ನೆರಡು ತಿಂಗಳಲ್ಲಿ ರೂ.39 ಕೋಟಿ ವೆಚ್ಚದಲ್ಲಿ 550 ಸಿ.ಸಿ. ಕ್ಯಾಮರಾಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸಲು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.
ನಗರದಲ್ಲಿ ಹಂತ ಹಂತವಾಗಿ 5000 ಸಿ.ಸಿ. ಟಿ.ವಿ. ಅಳವಡಿಕೆಗೆ ಕ್ರಮ ಜರುಗಿಸಲಾಗಿದೆ. ಪೊಲೀಸ್ ಕರೆ 100 ಈಗಿರುವ 15 ಲೈನ್‍ಗಳ ಬದಲು 100 ಲೈನ್‍ಗಳಿಗೆ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ಇನ್ನೆರಡು ತಿಂಗಳಲ್ಲಿ ಇದು ಕಾರ್ಯಗತಗೊಳ್ಳಲಿದೆ. ಇದಕ್ಕಾಗಿ ಗೃಹ ಇಲಾಖೆ ರೂ.14 ಕೋಟಿ ರೂ. ವೆಚ್ಚ ಮಾಡಲಿದೆ ಎಂದರು.
ಸತ್ಯಕ್ಕೆ ದೂರ: ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ನಗರದಲ್ಲಿ 1600 ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನೇಮಕ ಮಾಡಲಾಗಿದ್ದು ಘಟನೆ ನಡೆದ ಸ್ಥಳದಲ್ಲಿ 70 ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಸಾಕಷ್ಟು ಸಂಖ್ಯೆ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಕರ್ತವ್ಯದಲ್ಲಿದ್ದರು. ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲವೆಂಬುದು ಸತ್ಯಕ್ಕೆ ದೂರವಾದುದು ಎಂದು ಇದೇ ಸಂದರ್ಭದಲ್ಲಿ ಗೃಹ ಸಚಿವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.