ಸ್ಯಾಂಡಲ್‌ವುಡ್ ಕ್ವೀನ್, ನಟಿ ರಮ್ಯಾ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾದ್ಮೇಲಂತೂ ಆಗಾಗೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡ್ತಾನೆ ಇರ್ತಾರೆ. ಆದ್ರೆ ಈ ಬಾರಿ ಅವರ ಟ್ವಿಟರ್ ಪೋಸ್ಟ್‌ವೊಂದು ಅವ್ರನ್ನ ಸಂಕಷ್ಟಕ್ಕೆ ಸಿಲುಕಿಸಿದಂತಿದೆ. ಇತ್ತೀಚೆಗೆ ರಮ್ಯಾ, ಪ್ರಧಾನಿ ನರೇಂದ್ರ ಮೋದಿ ತಮ್ಮ ಮೇಣದ ಪ್ರತಿಮೆಯ ಹಣೆಯ ಮೇಲೆ ‘ಚೋರ್’ ಎಂದು ಬಣ್ಣ ಬಳಿಯುತ್ತಿರುವಂತೆ ಫೋಟೋಶಾಪ್ ಮಾಡಿದ ಚಿತ್ರವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ರು. ಇದಕ್ಕೆ ಚೋರ್ ಪಿಎಂ ಚುಪ್ ಹೈ ಅಂತಾ ಕ್ಯಾಪ್ಶನ್ ಕೂಡ ಕೊಟ್ಟಿದ್ರು. ಈ ಹಿನ್ನೆಲೆಯಲ್ಲಿ ಇದೀಗ ರಮ್ಯಾ ವಿರುದ್ಧ ದೇಶದ್ರೋಹದ ಆರೋಪದಡಿ ಉತ್ತರಪ್ರದೇಶ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಲಖನೌ ಮೂಲದ ವಕೀಲ ಸೈಯದ್ ರಿಜ್ವಾನ್ ಅಹ್ಮದ್ ಅವರು ರಮ್ಯಾ ವಿರುದ್ಧ ದೂರು ದಾಖಲಿಸಿದ್ದಾರೆ. ಸೈಯದ್ ಅವರ ದೂರಿನನ್ವಯ ಗೋಮತಿನಗರ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ 67 ಹಾಗೂ ದೇಶದ್ರೋಹ( ಸೆಕ್ಷನ್ 124ಎ) ಅಡಿ ಕೇಸ್ ದಾಖಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರೋ ಸೈಯದ್, ಎಫ್ಐಆರ್ ಪ್ರತಿಯ ಫೋಟೋ ಹಂಚಿಕೊಂಡಿದ್ದಾರೆ. ಎಷ್ಟು ಬಾರಿ ಹೇಳಿದ್ರೂ ರಮ್ಯಾ ತಮ್ಮ ಟ್ವೀಟ್ ಡಿಲೀಟ್ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದಾಗಿ ಸೈಯದ್ ಹೇಳಿದ್ದಾರೆ. ನನಗೆ ಬಿಜೆಪಿ/ಆರ್ಎಸ್ಎಸ್ನೊಂದಿಗೆ ಯಾವುದೇ ಸಂಬಂಧಿವಿಲ್ಲ ಎಂದು ಸೈಯದ್ ಸ್ಪಷ್ಟಪಡಿಸಿದ್ದು, ರಮ್ಯಾ ಮಾಡಿರುವ ಈ ಪೋಸ್ಟ್ ಭಾರತದ ಗಣತಂತ್ರ ಹಾಗೂ ಪ್ರಧಾನಿಯ ಮೇಲಿನ ದಾಳಿ ಎಂದು ಹೇಳಿದ್ದಾರೆ. ಈ ಸುದ್ದಿಗೆ ರಮ್ಯಾ, “ಓಹ್ ..!ಚೆನ್ನಾಗಿದೆ” ಎಂದಷ್ಟೇ ಇವತ್ತು ಪ್ರತಿಕ್ರಿಯಿಸಿದ್ದಾರೆ.
ಇದಲ್ಲದೆ ದೆಹಲಿ ಮೂಲದ ವಕೀಲ ವಿಭೋರ್ ಆನಂದ್(25) ಎಂಬುವವರು ರಮ್ಯಾ ವಿರುದ್ಧ 10 ಸಾವಿರ ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ. “ಮಂಗಳವಾರ ರಾತ್ರಿಯೊಳಗೆ ಟ್ವೀಟ್ ಅನ್ನು ತೆಗೆದು, ಕ್ಷಮೆ ಕೇಳದೇ ಇದ್ದಲ್ಲಿ ರಮ್ಯಾ ವಿರುದ್ಧ 10 ಸಾವಿರ ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಕೂಡ ಇದಕ್ಕೆ ಜವಾಬ್ದಾರಿಯಾಗುತ್ತಾರೆ ಎಂದು ಹೇಳಿದ್ದರು. ಇದೀಗ ರಮ್ಯಾಗೆ ನೀಡಿದ್ದ ಗಡುವು ಮುಗಿದಿದ್ದು ಕೇಸ್ ದಾಖಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.
10 ಸಾವಿರ ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ಶೇ.1ರಷ್ಟುಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಬೇಕು. ಇದಕ್ಕಾಗಿ ವಿಭೋರ್, ಆನ್ಲೈನ್ ಕ್ರೌಡ್ಫಂಡಿಂಗ್ ಮೂಲಕ ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ವಿಭೋರ್ ದೇಶದ್ರೋಹ ಪ್ರಕರಣ ದಾಖಲಿಸಿದ್ರು.