ಈ ಬಗ್ಗೆ ಸಂಘಟನೆಯ ಪದಾಧಿಕಾರಿಗಳು ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರಲ್ಲದೆ, ಶಿಕ್ಷಣ ನೀತಿಯ ಬಗ್ಗೆ ಕೆಲವರು ಹಬ್ಬಿಸುತ್ತಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಕೂಡಲೇ ಇಡೀ ನೀತಿಯ ವಿವರಗಳನ್ನು ರಾಜ್ಯದ ಜನತೆಯ ಮುಂದಿಡಬೇಕು ಎಂದು ಕೋರಿದರು. ಇದಕ್ಕೆ ಸಚಿವರು ಸಮ್ಮತಿಸಿದರು.
ಎಬಿವಿಪಿ ಮಾಡಿರುವ ಎಲ್ಲ ಮನವಿಗಳನ್ನು ಪರಿಶೀಲಿಸಿ ಶೀಘ್ರವೇ ಕ್ರಮ ವಹಿಸಲಾಗುವುದು ಎಂದ ಡಾ.ಅಶ್ವತ್ಥನಾರಾಯಣ ಅವರು ತಮ್ಮನ್ನು ಭೇಟಿ ಮಾಡಿದ ಎಬಿವಿಪಿ ವಲಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ, ರಾಷ್ಟ್ರೀಯ ಕಾರ್ಯದರ್ಶಿ ಹರ್ಷ, ರಾಜ್ಯ ಘಟಕದ ಅಧ್ಯಕ್ಷ ಡಾ.ಸತೀಶ, ರಾಜ್ಯ ಕಾರ್ಯದರ್ಶಿ ಪ್ರತೀಕ್ ಮಾಳಿ ಅವರಿಗೆ ಭರವಸೆ ನೀಡಿದರು.
ಇದಲ್ಲದೆ, ಕೋವಿಡ್‌ನಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಸರಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳ ಶುಲ್ಕ ಮನ್ನಾ ಮಾಡಬೇಕು, ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿರುವ ಖಾಲಿ ಬೋಧಕ ಹುದ್ದೆಗಳನ್ನು ಭರ್ತಿ ಮಾಡಬೇಕು, ಸರಕಾರಿ ಕಾಲೇಜುಗಳಲ್ಲಿಯೂ ಪದವಿ ಪ್ರವೇಶ ಪ್ರಕ್ರಿಯೆ ಆರಂಭ ಮಾಡಬೇಕು, ಕಾಲೇಜು ಗ್ರಂಥಾಲಯಗಳಿಗೆ ನೀಡುತ್ತಿರುವ ಅನುದಾನವನ್ನು ಬಿಡುಗಡೆ ಮಾಡಬೇಕು, ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕ್ರೀಡಾ ಮತ್ತು ಶಾರೀರಕ ತರಬೇತಿಗಾಗಿ ಪ್ರತಿ 50 ವಿದ್ಯಾರ್ಥಿಗಳಿಗೆ ಒಬ್ಬರಂತೆ ತರಬೇತಿದಾರರನ್ನು ನೇಮಕ ಮಾಡಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಡಾ.ಅಶ್ವತ್ಥನಾರಾಯಣ ಅವರು, ಈಗಾಗಲೇ ಈ ಬೇಡಿಕೆಗಳನ್ನು ಈಡೇರಿಸಲು ಸರಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.