Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಿಲ್ಲಾಧಿಕಾರಿ ಮಂಜುನಾಥ್‌ ಬಂಧನಕ್ಕೆ ಎಎಪಿ ಒತ್ತಾಯ

ಜಿಲ್ಲಾಧಿಕಾರಿ ಮಂಜುನಾಥ್‌ ಬಂಧನಕ್ಕೆ ಎಎಪಿ ಒತ್ತಾಯ
bengaluru , ಶನಿವಾರ, 25 ಜೂನ್ 2022 (16:23 IST)
ಲಂಚ ಪಡೆದ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ರವರನ್ನು ಅಮಾನತು ಮಾಡಿ,  ಶೀಘ್ರವೇ ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಆಮ್‌ ಆದ್ಮಿ ಪಾರ್ಟಿ ಆಗ್ರಹಿಸಿದೆ.
 
ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ವಕ್ತಾರ ಹಾಗೂ ಮಾಜಿ ಕೆಎಎಸ್‌ ಅಧಿಕಾರಿ ಕೆ.ಮಥಾಯಿ, “ಆನೇಕಲ್‌ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿ ಅರ್ಜಿದಾರರ ಪರ ತೀರ್ಪು ನೀಡಲು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು, ಮುಂಗಡವಾಗಿ 5 ಲಕ್ಷ ಪಡೆದಿರುವುದು ಎಸಿಬಿ ದಾಳಿಯಿಂದ ಸಾಬೀತಾಗಿದೆ. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮೂರನೇ ಆರೋಪಿಯೆಂದು ಎಸಿಬಿಯು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಶೀಘ್ರವೇ ಹುದ್ದೆಯಿಂದ ಅಮಾನತು ಮಾಡಿ, ಬಂಧಿಸಿ ವಿಚಾರಣೆ ನಡೆಸಬೇಕು” ಎಂದು ಆಗ್ರಹಿಸಿದರು.
 
“ಜಿಲ್ಲಾಧಿಕಾರಿ ಮಂಜುನಾಥ್‌ರವರು ಈ ಪ್ರಕರಣ ಮಾತ್ರವಲ್ಲದೇ, ಈ ಹಿಂದಿನ ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಕಂದಾಯ ಸಚಿವ ಆರ್‌.ಅಶೋಕ್‌ರವರು ಅವ್ಯವಹಾರ ಮಾಡಲೆಂದೇ ಭ್ರಷ್ಟ ಅಧಿಕಾರಿಯನ್ನು ಜಿಲ್ಲಾಧಿಕಾರಿಯಾಗಿ ನೇಮಿಸಿಕೊಂಡಿದ್ದಾರೆ. ಭ್ರಷ್ಟಾಚಾರ ಸಂಬಂಧ ಎಸಿಬಿ ನೀಡಿರುವ ವರದಿ ಕುರಿತು ಆರ್.ಅಶೋಕ್‌ ಪ್ರತಿಕ್ರಿಯಿಸಬೇಕು. ಮಂಜುನಾಥ್‌ ವಿರುದ್ಧದ ಎಲ್ಲ ಆರೋಪಗಳ ಕುರಿತು ಸಮಗ್ರ ತನಿಖೆಯಾಗಬೇಕು” ಎಂದು ಆಗ್ರಹಿಸಿದರು.
 
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಎಪಿ ಉಪಾಧ್ಯಕ್ಷರಾದ ಗೋಪಿನಾಥ್‌ ಮಾತನಾಡಿ, “ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರವು ಮಿತಿಮೀರಿದೆ. ಸಚಿವರು ಹಾಗೂ ಶಾಸಕರುಗಳು ಕೂಡ ಭ್ರಷ್ಟರಾಗಿರುವುದರಿಂದ ಅಧಿಕಾರಿಗಳನ್ನು ಪ್ರಶ್ನೆ ಮಾಡುವ ನೈತಿಕತೆಯನ್ನು ಅವರು ಕಳೆದುಕೊಂಡಿದ್ದಾರೆ. ಇದರಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದ್ದು, ಸಣ್ಣ ಕೆಲಸಕ್ಕೂ ಲಕ್ಷಗಟ್ಟಲೆ ಲಂಚ ನೀಡಬೇಕಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಯಲ್ಲಿನ ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವ ಬದಲು ಎಸಿಬಿಗೆ ದೂರು ನೀಡಿದ ಅಜಂ ಪಾಷಾರವರ ನಡೆ ಶ್ಲಾಘನೀಯ” ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈನಲ್ಲಿ 144 ಸೆಕ್ಷನ್ ಜಾರಿ!