ಕಾಗೆವಾಡ : ಈ ಬಾರಿ ನನಗೆ ಟಿಕೆಟ್ ಕೊಡಿ ಇಲ್ಲವಾದರೆ ಕಾಂಗ್ರೆಸ್ಗೆ ಹೋಗುತ್ತೇನೆ ಎಂದು ಬಿಜೆಪಿಯ ಮಾಜಿ ಶಾಸಕ ರಾಜು ಕಾಗೆ ಅಸಮಾಧಾನ ಹೊರಹಾಕಿದ್ದಾರೆ.
ಕಾಗೆವಾಡ ಕ್ಷೇತ್ರದ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಗೆ ಬಿಜೆಪಿ ಟಿಕೆಟ್ ನೀಡುವ ಹಿನ್ನೆಲೆ, ಬಿಜೆಪಿಯ ಮಾಜಿ ಶಾಸಕ ರಾಜು ಕಾಗೆ ಅವರನ್ನು ಸಮಾಧಾನ ಮಾಡಲು ಕಾಡಾ ನಿಗಮ ಮಂಡಳಿ ಸ್ಥಾನ ನೀಡಲಾಗಿತ್ತು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಬಿಜೆಪಿ ನಾಯಕರು ಆಪ್ತರನ್ನು ತಿರಸ್ಕಾರ ಮಾಡಿದ್ದಾರೆ. ಕಾಡಾ ನಿಗಮ ಮಂಡಳಿ ಸ್ಥಾನ ನನ್ನ ಯೋಗ್ಯತೆಗೆ ತಕ್ಕ ಸ್ಥಾನ ಅಲ್ಲ. ನಾನು ನಾಲ್ಕು ಬಾರಿ ಶಾಸಕನಾಗಿ ಕೆಲಸ ಮಾಡಿದ ವ್ಯಕ್ತಿ. ಒಬ್ಬ ಜಿಲ್ಲಾ ಪಂಚಾಯತ್ ಸದಸ್ಯನಿಗೆ ನೀಡುವ ಸ್ಥಾನವನ್ನು ನನಗೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಟಿಕೆಟ್ ನೀಡಲು ನನಗೆ ನಿಗಮ ಮಂಡಳಿ ಸ್ಥಾನ ನೀಡಲಾಗಿದೆ. ನನಗೆ ಟಿಕೆಟ್ ಕೊಡಿ, ಇಲ್ಲವಾದರೆ ಕಾಂಗ್ರೆಸ್ ಗೆ ಹೋಗುತ್ತೇನೆ. ಈಗಾಗಲೇ ಕಾಂಗ್ರೆಸ್ ನವರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದೇನೆ. ಪಕ್ಷದಲ್ಲಿ ಸರಿಯಾದ ಸ್ಥಾನಮಾನ ನೀಡದೆ ಹೋದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಖಡಕ್ ಆಗಿ ತಿಳಿಸಿದ್ದಾರೆ.