ಪಾಕಿಸ್ತಾನದ ಕರಾಚಿಯ ಬಳಿ ಮಸೀದಿಯೊಂದರ ಸಮೀಪ ಬಾಂಬ್ ಸ್ಫೋಟಗೊಂಡಿದ್ದು, ಈ ದುರಂತದಲ್ಲಿ 52 ಜನ ಮೃತಪಟ್ಟಿದ್ದು, 130ಕ್ಕು ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಈದ್ ಮಿಲಾ-ದುನ್- ನಬಿ ಆಚರಿಸಲು ಹಾಗೂ ಪ್ರಾರ್ಥನೆಯ ಸಲುವಾಗಿ ಜನ ಸೇರಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ. ಪಾಕಿಸ್ತಾನದ ಬಲೋಚಿಸ್ತಾನ ಪ್ರಾಂತ್ಯದ ಮಸ್ತುಂಗ್ ಜಿಲ್ಲೆಯ ಮದೀನಾ ಮಸೀದಿ ಬಳಿ ಈ ದುರಂತ ನಡೆದಿದೆ. ಮಸ್ತುಂಗ್ ನಗರದ ಸ್ಟೇಷನ್ ಹೌಸ್ ಆಫೀಸರ್ ಮೊಹಮ್ಮದ್ ಜಾವೇದ್ ಲೆಹ್ರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಸ್ಫೋಟವು ಆತ್ಮಹತ್ಯಾ ದಾಳಿಯಿಂದ ಸಂಭವಿಸಿದೆ. ಆತ್ಮಾಹುತಿ ಬಾಂಬರ್ ಡಿಎಸ್ಪಿಯ ಕಾರಿನ ಪಕ್ಕದಲ್ಲೇ ತನ್ನನ್ನು ತಾನು ಸ್ಫೋಟಿಸಿಕೊಂಡ ಎಂದು ಅವರು ಮಾಹಿತಿ ನೀಡಿದ್ದಾರೆ.