ರಾಜ್ಯದಲ್ಲಿ ಕೊಳವೆಬಾವಿ ದುರಂತಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ 17 ವರ್ಷಗಳಲ್ಲಿ 9 ಕೊಳವೆ ಬಾವಿ ದುರಂತಗಳು ನಡೆದಿವೆ. ಆದರೂ, ಜಮೀನು ಮಾಲೀಕರು ಮಾತ್ರ ಎಚ್ಚರಿಕೆ ವಹಿಸುತ್ತಿಲ್ಲ. ಬೋರ್ ವೆಲ್ ಕೊರೆದ ಬಳಿಕ ವಿಫಲವಾದ ಕೊಳವೆ ಬಾವಿಗಳನ್ನ ಮುಚ್ಚದಿರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ.
ಬೋರ್ ವೆಲ್ ತೆಗೆದ ಬಳಿಕ ಅವುಗಳನ್ನ ಮುಚ್ಚುವ ಬಗ್ಗೆ 2010ರಲ್ಲೇ ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನ ನೀಡಿದೆ. 2014ರಲ್ಲಿ ಬಾಗಲಕೋಟೆಯಲ್ಲಿ ತಿಮ್ಮಣ್ಣ ಎಂಬ ಬಾಲಕ ಕೊಳವೆಬಾವಿಗೆ ಬಿದ್ದು ಸಾವನ್ನಪ್ಪಿದ ಬಳಿಕ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಇಂತಹ ಪ್ರಕರಣಗಳಲ್ಲಿ ಜಿಲ್ಳಾಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ದಂಡ ವಸೂಲಿ ಮಾಡುವಂತೆ ಆದೇಶಿಸಿತ್ತು. ಸುಪ್ರೀಂಕೋರ್ಟ್ ಮಾರ್ಗ ಸೂಚಿ ಜಾರಿಮಾಡದ ಕುರಿತಂತೆಯೂ ತರಾಟೆಗೆ ತೆಗೆದುಕೊಂಡಿತ್ತು.
ಬಳಿಕ ಸರ್ಕಾರ ರಾಜ್ಯಾದ್ಯಂತ ಕೊಳವೆ ಬಾವಿ ಮುಚ್ಚಲು ಆದೇಶಿಸಿತ್ತು. ನುರಾರು ಕೊಳವೆಬಾವಿಗಳನ್ನ ಮುಚ್ಚುವ ಕಾರ್ಯವೂ ನಡೆದಿತ್ತು. ಆದರೆ, ಇದಾದ ಬಳಿಕ ಮತ್ತೆ ನಿಲರ್ಕ್ಷ್ಯ ತೋರಿರುವುದು ಬೆಳಗಾವಿಯ ಅಥಣಿಯ ಝಂಜರವಾಡದಲ್ಲಿ ಸ್ಪಷ್ಟವಾಗಿದೆ. ಶಂಕರ ಹಿಪ್ಪರಗಿ ಎಂಬುವವರ ಕೊಳವೆಬಾವಿಗೆ 6 ವರ್ಷದ ಬಾಲಕಿ ಕಾವೇರಿ ಬಿದ್ದಿರುವುದು ಇದಕ್ಕೆ ಸಾಕ್ಷಿ.