75ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು 2 ದಿನ ಬಾಕಿ ಇದ್ದು, ಈ ಅಮೃತ ಘಳಿಗೆಯ ಆಚರಣೆಗೆ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ದೇಶದೆಲ್ಲೆಡೆ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದು, ಬಾಗಲಕೋಟೆಯಲ್ಲಿ 500 ಮೀಟರ್ ಉದ್ದದ ತಿರಂಗಾ ಯಾತ್ರೆ ಮಾಡುವುದರ ಮೂಲಕ ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಂದ ಈ ಕಾರ್ಯಕ್ರಮ ಆಯೋಜನೆ ಆಗಿದ್ದು, ಶಾಸಕ ವೀರಣ್ಣ ಚರಂತಿಮಠ ಯಾತ್ರೆಗೆ ಚಾಲನೆ ನೀಡಿದರು. ನಗರದ ವಿದ್ಯಾಗಿರಿಯ ಪ್ರಮುಖ ಬಡಾವಣೆಗಳಲ್ಲಿ 500 ಮೀಟರ್ ಉದ್ದದ ತಿರಂಗವು ಸಂಚರಿಸುತ್ತಿದ್ದು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ಯಾತ್ರೆಯಲ್ಲಿ ವಿಶೇಷವಾಗಿ ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ವೇಷಧಾರಿಗಳು ನೋಡುಗರ ಗಮನ ಸೆಳೆದರು. ಜಿಲ್ಲೆಯಾದ್ಯಂತ ಮನೆಗಳ ಮೇಲೆ, ಅಂಗಡಿಗಳ ಮೇಲೆ ಸೇರಿದಂತೆ ಎಲ್ಲೆಡೆ ತ್ರಿವರ್ಣ ಧ್ವಜ ಗಮನ ಸೆಳೆಯುತ್ತಿದ್ದು, ಅಮೃತ ಮಹೋತ್ಸವಕ್ಕೆ ಹೊಸ ಮೆರುಗು ತಂದಿದೆ.