ಮೈಸೂರು-ಬೆಂಗಳೂರು ನಡುವೆ ನಿರ್ಮಾಣವಾಗುತ್ತಿರುವ ದಶಪಥ ರಸ್ತೆಯ ಟೋಲ್ ಶುಲ್ಕ 200ರಿಂದ 250 ರೂ. ನಿಗದಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ದಶಪಥ ರಸ್ತೆ ಕಾಮಗಾರಿ ದಸರಾ ವೇಳೆಗೆ ಮುಕ್ತಾಯವಾಗಿ ಸಾರ್ವಜನಿಗೆ ಬಳಕೆಗೆ ಲಭಿಸಲಿದೆ ಎಂದು ಸಂಸದ ಪ್ರತಾಪ್ ಸಿಂಹ ಪದೇಪದೆ ಹೇಳುತ್ತಿದ್ದಾರೆ. ಆದರೆ ಈ ರಸ್ತೆಗೆ ಸುಂಕ ನಿಗದಿಪಡಿಸಲಿದ್ದು, ಇದರ ಮೊತ್ತ ಎಷ್ಟಾಗಬಹುದು ಎಂಬ ಗುಟ್ಟು ಬಿಟ್ಟುಕೊಡುತ್ತಿಲ್ಲ.
ಮೂಲಗಳ ಪ್ರಕಾರ ಮೈಸೂರು- ಬೆಂಗಳೂರು ರಸ್ತೆಯಲ್ಲಿ ಪ್ರಯಾಣಿಸಬೇಕಾದರೆ ಅಂದಾಜು 200-250 ರೂ. ಸೇವಾ ಶುಲ್ಕ ಇರಲಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕೃತವಾಗಿ ಆದೇಶ ಹೊರಡಿಸಿಲ್ಲವಾದರೂ ಪ್ರತಿ ಕಿ.ಮೀ.ಗೆ 1.5ನಿಂದ 2ರೂ. ಸುಂಕ ವಸೂಲಿಗೆ ಅಂದಾಜಿಸಲಾಗಿದೆ. ಇದರ ಪ್ರಕಾರ 117 ಕಿ.ಮೀ. ದೂರದ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಪ್ರಯಾಣ ಮಾಡಲು 200 ರಿಂದ 250 ರೂ. ಸುಂಕ ಪಾವತಿ ಮಾಡಬೇಕಾಗಿ ಬರಬಹುದು.
ಈಗಾಗಲೇ ಎರಡು ಕಡೆಗಳಲ್ಲಿ ಟೋಲ್ ಪ್ಲಾಜಾಗಳ ನಿರ್ಮಾಣ ಆಗಿದ್ದು, ಒಂದು ಶ್ರೀರಂಗಪಟ್ಟಣದ ನಂತರ ಗಾಣಗೂರು ಬಳಿ ಇದ್ದರೆ, ಮತ್ತೊಂದು ಕುಂಬಳಗೋಡು ಸಮೀಪದ ಕಣಮಿಣಿಕೆಯಲ್ಲಿ ನಿರ್ಮಾಣವಾಗಿದೆ.