ಆಂಧ್ರಪ್ರದೇಶದಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಎಲೂರು ಜಿಲ್ಲೆಯಲ್ಲಿ ಶನಿವಾರ 18 ಬೀದಿ ನಾಯಿಗಳಿಗೆ ವಿಷ ನೀಡಿ ಕೊಂದು ಹಾಕಲಾಗಿದೆ. ಚೇಬ್ರೋಲೆ ಗ್ರಾಮದ ಮುಖಂಡರ ಆದೇಶದ ಮೇರೆಗೆ 18 ನಾಯಿಗಳಿಗೆ ವಿಷದ ಇಂಜೆಕ್ಷನ್ ನೀಡಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಚೇಬ್ರೋಲೆ ಗ್ರಾಮದ ಸರಪಂಚ್ ಮತ್ತು ಕಾರ್ಯದರ್ಶಿ ವಿರುದ್ಧ ಆಂಧ್ರಪ್ರದೇಶ ಪೊಲೀಸರು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ನಾಯಿಗಳ ಸಾವಿನ ನಂತರ ಗ್ರಾಮದ ಮುಖ್ಯಸ್ಥರ ವಿರುದ್ಧ ತ್ವರಿತ ಕ್ರಮಕ್ಕೆ ಪ್ರಾಣಿ ಹಕ್ಕುಗಳ ಗುಂಪುಗಳು ಕರೆ ನೀಡಿವೆ.. ಚೇಬ್ರೋಲೆ ಗ್ರಾಮದ ವಿವಿಧೆಡೆ ಬೀದಿ ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂದಿತ್ತು. ಈ ವಿಷಯ ತಿಳಿದು ಗ್ರಾಮಕ್ಕೆ ದೌಡಾಯಿಸಿದ ಪ್ರಾಣಿ ಪ್ರಿಯರು ಎಲ್ಲರನ್ನೂ ಈ ಬಗ್ಗೆ ವಿಚಾರಿಸಿದಾಗ ಗ್ರಾಮದ ಕಾರ್ಯದರ್ಶಿ ಹಾಗೂ ಇತರರ ಒತ್ತಾಯದ ಮೇರೆಗೆ ನಾಯಿಗಳಿಗೆ ವಿಷದ ಇಂಜೆಕ್ಷನ್ ಹಾಕಲಾಗಿದೆ ಎಂಬ ವಿಷಯ ಗೊತ್ತಾಗಿದೆ. ಈ ವರ್ಷದ ಆರಂಭದಲ್ಲಿ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಬೀದಿನಾಯಿಗಳನ್ನು ಕೊಂದು ಹಾಕಲಾಗಿತ್ತು. ನಾಯಿಗಳ ಶವಗಳು ಗುಂಡಿಯಲ್ಲಿ ಬಿದ್ದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.