ರಾಜ್ಯ ಸರ್ಕಾರ ಘೋಷಿಸಲಿರುವ ಬರಪೀಡಿತ ತಾಲೂಕುಗಳ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪೂರ್ಣ 10 ಕೆ.ಜಿ. ಅಕ್ಕಿ ನೀಡಲು ತೀರ್ಮಾನಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ 5 ಕೆ.ಜಿ. ದವಸ ಮತ್ತು ಉಳಿದ ಐದು ಕೆ.ಜಿ. ಬದಲು ಹಣವನ್ನು ಪಡಿತರ ಚೀಟಿದಾರರ ಖಾತೆಗೆ ನೀಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಸುಮಾರು 114 ಕ್ಕೂ ಹೆಚ್ಚು ತಾಲೂಕುಗಳು ಬರದ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ. ಈ ತಾಲೂಕುಗಳ ಎಲ್ಲಾ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ 5 ಕೆ.ಜಿ.ಗೆ ಹಣ ನೀಡುವ ಬದಲು ಸಂಪೂರ್ಣ 10 ಕೆಜಿ ಅಕ್ಕಿ ವಿತರಣೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.