ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಗಲಾಟೆ ಸಮಯದಲ್ಲಿ ನಡೆದ ಗೋಲಿಬಾರ್ಗೆ ಬಲಿಯಾದ ಅಮಾಯಕ ಉಮೇಶ್ ಕುಟುಂಬದ ಶೋಕ ಮುಗಿಲು ಮುಟ್ಟಿದೆ.
ಪೊಲೀಸರ ಗುಂಡೇಟಿಗೆ ಬಲಿಯಾದ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗ ಸಿಂಗೋನಹಳ್ಳಿಯ ಉಮೇಶ ತೀರ ಬಡ ಕುಟುಂಬದ ಯುವಕನಾಗಿದ್ದು, ದುಡಿಯುತ್ತಿದ್ದ ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡಿರುವ ಕುಟುಂಬಕ್ಕೀಗ ದಿಕ್ಕೇ ತೋಚದಂತಾಗಿದೆ.
ತಂದೆ ಸಿದ್ದಪ್ಪ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರೆ, ತಾಯಿ ತೋಪಮ್ಮನಿಗೆ ಇತ್ತೀಚಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಉಮೇಶ್ ಅವರಿಗೆ ಎರಡು ವರ್ಷದ ಹೆಣ್ಣುಮಗುವಿದ್ದು ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ.
ಹೊಟ್ಟೆಪಾಡಿಗಾಗಿ ಉಮೇಶ್ ಬೆಂಗಳೂರಿನಲ್ಲಿದ್ದರು. ಸೋಮವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಪೋಲೀಸರು ನಡೆಸುತ್ತಿದ್ದ ಗೋಲಿಬಾರ್ ವೇಳೆ ಉಮೇಶ್ ಅವರಿಗೆ ಗುಂಡು ತಗುಲಿತ್ತು. ಬೆನ್ನಿಗೆ ಬಿದ್ದ ಗುಂಡು ಎದೆ ಮೂಲಕ ಹೊರಬಂದು ಚಿಕಿತ್ಸೆ ಫಲಕಾರಿಯಾಗದೆ ಉಮೇಶ್ ಸಾವನ್ನಪ್ಪಿದ್ದರು.
ಸರ್ಕಾರ ಉಮೇಶ್ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಜೀವನ ನಿರ್ವಹಣೆಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡಿರುವ ಪರಿವಾರಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂದು ಸಂಬಂಧಿಕರು, ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ