ಬೆಂಗಳೂರು: ಹಿಂದೆಲ್ಲಾ ಸ್ಟಾರ್ ನಟ ಎನ್ನುವ ಪದವೇ ಬಳಕೆಯಲ್ಲಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಒಂದು ಸಿನಿಮಾ ಹಿಟ್ ಕೊಟ್ಟ ತಕ್ಷಣವೇ ನಟರು ಸೂಪರ್ ಸ್ಟಾರ್ ಗಳಾಗುತ್ತಿದ್ದಾರೆ. ಅವರ ಸಂಭಾವನೆ ಗಗನಕ್ಕೇರುತ್ತದೆ. ದೇಹ ದಂಡನೆ ಮಾಡುವುದು ಫ್ಯಾಶನ್ ಆಗಿದೆ. ಅಭಿನಯಕ್ಕಿಂತ ಲುಕ್ ಗೆ ಪ್ರಾಧಾನ್ಯ ಸಿಗುತ್ತಿದೆ.
ಇದರಿಂದಾಗಿಯೇ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿರುವ ಇಂದಿನ ಜನರೇಷನ್ ನ ನಟರು ಹಾದಿ ತಪ್ಪುತ್ತಿದ್ದಾರೆ ಎಂದೇ ಚಿತ್ರರಂಗವನ್ನು ಬಲ್ಲವರು ಹೇಳುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಇಲ್ಲ ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ.
ಬೆಂಕಿಯಲ್ಲದೇ ಹೊಗೆಯಾಡಲ್ಲ. ಹಾಗೆಯೇ ಡ್ರಗ್ ಬಳಕೆ ಮಾಡುವುದು ಸಂಪೂರ್ಣ ಸುಳ್ಳು ಎಂದಾದರೆ ಇಷ್ಟು ಕರಾರುವಾಕ್ ಆಗಿ ಡ್ರಗ್ ಪೆಡ್ಲರ್ ಗಳೂ ಆರೋಪ ಮಾಡಲ್ಲ. ಇದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಇದಕ್ಕೆಲ್ಲಾ ಕಾರಣ ಒಂದು ಆಧುನಿಕ ಜೀವನ ಶೈಲಿ. ಇನ್ನೊಂದು ದುಬಾರಿ ಸಂಭಾವನೆ. ದುಡ್ಡು ಮನುಷ್ಯನನ್ನು ಎಂಥಾ ಕೆಟ್ಟ ದಾರಿಗೆ ಬೇಕಾದರೂ ನಡೆಸಬಲ್ಲದು. ಹಣ ಬಂದ ಕೂಡಲೇ ನಮ್ಮ ಸುತ್ತಲೂ ಇರುವೆಗಳಂತೆ ಮುತ್ತಿಕೊಳ್ಳುವವರೂ ಹೆಚ್ಚಾಗುತ್ತಾರೆ. ಹೊಗಳು ಭಟ್ಟರ ಸುತ್ತಲೂ ಕಲ್ಪನಾ ಲೋಕದಲ್ಲಿ ತೇಲಾಡುವ ಯುವ ನಟರು ಯಾರದ್ದೋ ಆಮಿಷಕ್ಕೆ ಬಲಿಯಾಗಿ ತಪ್ಪು ದಾರಿಗಿಳಿಯುತ್ತಿದ್ದಾರೆ ಎನ್ನುವುದೂ ಅಷ್ಟೇ ಸತ್ಯ.